ADVERTISEMENT

ಸರ್ಕಾರಕ್ಕೆ 2ನೇ ಬಾರಿ ಮುಖಭಂಗ:ಧಾರ್ಮಿಕ ಸಂಸ್ಥೆಗಳ ಮಸೂದೆಗೆ ಮೇಲ್ಮನೆಯಲ್ಲಿ ಸೋಲು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 16:25 IST
Last Updated 23 ಫೆಬ್ರುವರಿ 2024, 16:25 IST
<div class="paragraphs"><p>ವಿಧಾನ ಪರಿಷತ್‌</p></div>

ವಿಧಾನ ಪರಿಷತ್‌

   

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ’ಗೆ ವಿಧಾನ ಪರಿಷತ್‌ನಲ್ಲಿ ಸೋಲುಂಟಾಗಿದೆ. ಆ ಮೂಲಕ, ವಿಧಾನ ಮಂಡಲದ ಬಜೆಟ್‌ ಅಧಿವೇಶನದಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರ ಮುಖಭಂಗ ಉಂಟಾಗಿದೆ.

‘ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ’ಗೆ ವಿಧಾನ ಪರಿಷತ್‌ನಲ್ಲಿ ಸೋಲುಂಟಾಗಿತ್ತು. ಈ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸುವ ಸಂಬಂಧ ನಡೆದ ಮತದಾನದಲ್ಲಿ ವಿರೋಧ ಪಕ್ಷಗಳು ಮೇಲುಗೈ ಸಾಧಿಸಿದವು.

ADVERTISEMENT

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ₹ 1 ಕೋಟಿಗೂ ಹೆಚ್ಚು ವರಮಾನ ಹೊಂದಿರುವ ದೇವಸ್ಥಾನಗಳ ಹುಂಡಿಯಿಂದ ವರ್ಷಕ್ಕೆ ಶೇ 10ರಷ್ಟು ಮತ್ತು ₹ 10 ಲಕ್ಷದಿಂದ ₹ 1 ಕೋಟಿವರೆಗಿನ ವರಮಾನ ಹೊಂದಿರುವ ದೇವಸ್ಥಾನಗಳಿಂದ ಶೇ 5ರಷ್ಟನ್ನು ‘ಸಾಮಾನ್ಯ ಸಂಗ್ರಹಣಾ ನಿಧಿ’ಗೆ ಸಂದಾಯ ಮಾಡುವುದು. ಮತ್ತು ಹೀಗೆ ಸಂಗ್ರಹವಾಗುವ ನಿಧಿಯನ್ನು ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ.

‌ಈ ತಿದ್ದುಪಡಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು, ತಿದ್ದುಪಡಿಯನ್ನು ವಾಪಸ್‌ ಪಡೆಯುವಂತೆ ಪಟ್ಟು ಹಿಡಿದರು. ಮಸೂದೆ ಮಂಡಿಸಿದ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ‘ಸಾಮಾನ್ಯ ಸಂಗ್ರಹಣಾ ನಿಧಿ ಬಳಸಿಕೊಂಡು 34 ಸಾವಿರ ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ವಿಮಾ ಸೌಲಭ್ಯ ಒದಗಿಸುವ ಪ್ರಸ್ತಾವ ಇಲಾಖೆಯ ಮುಂದಿದೆ’ ಎಂದು ಸಮರ್ಥನೆ ನೀಡಿದರು.

ಆದರೆ, ಬಿಜೆಪಿ, ಜೆಡಿಎಸ್‌ ಸದಸ್ಯರು ಮಣಿಯದೇ ಇದ್ದಾಗ, ಈ ತಿದ್ದುಪಡಿಯ ಕುರಿತಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ ಬಳಿಕ ಸೋಮವಾರ (ಫೆ.26) ಮತ್ತೆ ಮಂಡಿಸಲು ಅವಕಾಶ ನೀಡುವಂತೆ ರಾಮಲಿಂಗಾರೆಡ್ಡಿ ಕೋರಿದರು. ಆದರೆ, ಮಸೂದೆಯನ್ನು ಚರ್ಚೆಗೆ (ಪರ್ಯಾವಲೋಚನೆ) ತೆಗೆದುಕೊಂಡ ಬಳಿಕ ಮುಂದೂಡಲು ಅವಕಾಶ ಇಲ್ಲ ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಹೇಳಿದರು. ಈ ಬಗ್ಗೆ ಪರಸ್ಪರ ಚರ್ಚಿಸುವಂತೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿಗೆ ಸೂಚಿಸಿ ಸದನವನ್ನು 15 ನಿಮಿಷ ಮುಂದೂಡಿದರು.

ಮತ್ತೆ ಕಲಾಪ ಆರಂಭಗೊಂಡರೂ ಬಿಜೆಪಿ– ಜೆಡಿಎಸ್‌ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಒಮ್ಮತ ಮೂಡದ ಕಾರಣ ಉಪ ಸಭಾಪತಿ ಪ್ರಸ್ತಾವವ‌ನ್ನು ಧ್ವನಿಮತದ ವಿಭಜನೆಗೆ ಹಾಕಿದರು. ಮತ ವಿಭಜನೆಯಲ್ಲಿ ವಿರೋಧ ಪಕ್ಷಗಳು ಮೇಲುಗೈ ಸಾಧಿಸಿದವು. ಮಸೂದೆಯ ಪರವಾಗಿ ಏಳು, ವಿರುದ್ಧವಾಗಿ 18 ಮತಗಳ ಚಲಾವಣೆಗೊಂಡವು. 

ಮಸೂದೆ ತಿರಸ್ಕೃತಗೊಳ್ಳುತ್ತಲೇ ಸಂಭ್ರಮಿಸಿದ ಬಿಜೆಪಿ, ಜೆಡಿಎಸ್‌ ಸದಸ್ಯರು ‘ಜೈ ಶ್ರೀರಾಮ್‌’ ಘೋಷಣೆ ಕೂಗಿದರು. ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ‘ಭಾರತ್‌ ಮಾತಾಕಿ ಜೈ’, ‘ಜೈ ಭೀಮ್’ ಎಂದು ಘೋಷಣೆ ಕೂಗಿದರು. 

ಈ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌, ಬಿಜೆಪಿಯ ತೇಜಸ್ವಿನಿಗೌಡ, ಭಾರತಿ ಶೆಟ್ಟಿ, ಪ್ರತಾಪ್‌ ಸಿಂಹ ನಾಯಕ್, ಜೆಡಿಎಸ್‌ನ ಟಿ.ಎ‌. ಶರವಣ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.