ADVERTISEMENT

ಯುನೆಸ್ಕೊ ಪಾರಂಪರಿಕ ತಾಣ: ತಾತ್ಕಾಲಿಕ ಪಟ್ಟಿಗೆ ಹಿರೇಬೆಣಕಲ್‌ ಗೋರಿಗಳು

​ಪ್ರಜಾವಾಣಿ ವಾರ್ತೆ
Published 21 ಮೇ 2021, 19:31 IST
Last Updated 21 ಮೇ 2021, 19:31 IST
ಗಂಗಾವತಿ ತಾಲ್ಲೂಕು ಬೆಣಕಲ್ ಗ್ರಾಮದ ಬಳಿಯ ಪ್ರಾಗೈತಿಹಾಸಿಕ ಕಾಲದ ಮೋರೇರ ಬೆಟ್ಟದ ಮೇಲಿನ ಶಿಲಾ ಸಮಾಧಿಗಳು.‌
ಗಂಗಾವತಿ ತಾಲ್ಲೂಕು ಬೆಣಕಲ್ ಗ್ರಾಮದ ಬಳಿಯ ಪ್ರಾಗೈತಿಹಾಸಿಕ ಕಾಲದ ಮೋರೇರ ಬೆಟ್ಟದ ಮೇಲಿನ ಶಿಲಾ ಸಮಾಧಿಗಳು.‌   

ನವದೆಹಲಿ: ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪ‍ಟ್ಟಿಗೆ ಸೇರ್ಪ ಡೆಗೆ ಪರಿಶೀಲಿಸಲು ಭಾರತವು ಸಲ್ಲಿಸಿ ರುವ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಶಿಲಾ ಯುಗದ ಹಿರೇಬೆಣಕಲ್‌ನ ಗೋರಿಗಳು ಮತ್ತು ಗುಹಾಚಿತ್ರಗಳು ಸ್ಥಾನ‍ ಪ‍ಡೆದಿವೆ. ತಮಿಳುನಾಡಿನ ಕಾಂಚೀಪುರಂ ದೇವಾ ಲಯ ಕೂಡ ಈ ಪಟ್ಟಿಯಲ್ಲಿ ಸೇರಿದೆ.

ಪುರಾತತ್ವ ಇಲಾಖೆ 9 ಪಾರಂಪರಿಕ ಸ್ಥಳಗಳನ್ನು ನಾಮನಿರ್ದೇಶನ ಮಾಡಿತ್ತು. ಅವುಗಳಲ್ಲಿ 6 ಸ್ಥಳಗಳು ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮಹಾರಾಷ್ಟ್ರದಲ್ಲಿ ಮರಾಠಾ ದೊರೆಗಳು ನಿರ್ಮಿಸಿರುವ ಸಾಲುಸಾಲು ಕೋಟೆಗಳು, ಮಧ್ಯಪ್ರದೇಶದ ಬೇದಘಾಟ್‌–ಲಾಮೆತಘಾಟ್, ಸತುಪುರದ ಹುಲಿ ಅಭಯಾರಣ್ಯ ಮತ್ತು ವಾರಾಣಸಿಯ ಗಂಗಾ ನದಿಯ ಮುಂಭಾಗ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಪಾರಂಪರಿಕ ತಾಣಗಳು.

ಈ 6 ಸ್ಥಳಗಳನ್ನು ಏ.14ರಂದು ಸೇರಿಸಲಾಗಿದೆ. ಈ ಮೂಲಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಸ್ಮಾರಕಗಳ ಸಂಖ್ಯೆ 48 ತಲುಪಿದೆ.ಯುನೆಸ್ಕೊ ಮಾಗರ್ಸೂಚಿ ಪ್ರಕಾರ ವಿಶ್ವ ಪಾರಂಪರಿಕ ತಾಣದ ಅಂತಿಮ ಪಟ್ಟಿ ಮಾಡುವ ಮೊದಲು, ಹಲವು ಸ್ಥಳಗಳು ಅಥವಾ ಸ್ಮಾರಕಗಳ ಹೆಸರನ್ನು ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸುವುದು ಕಡ್ಡಾಯ. ಈ ಪಟ್ಟಿ ಸುಮಾರು ಒಂದು ವರ್ಷದ ಕಾಲ ಇರುತ್ತದೆ. ಬಳಿಕ ಯುನೆಸ್ಕೊ ಅಂತಿಮ ಪಟ್ಟಿಯನ್ನು ಪ್ರಕಟಿಸುತ್ತದೆ.

ADVERTISEMENT

ಹಿರೇಬೆಣಕಲ್‌ ಅನ್ನು ಪಟ್ಟಿಗೆ ಸೇರಿಸಿರುವ ಕುರಿತು ಸರ್ಕಾರ ಈ ರೀತಿ ಸಮರ್ಥನೆ ನೀಡಿದೆ: ‘2,500 ವರ್ಷಗಳಿಂದಲೂ ಈ ಶಿಲಾ ವಿನ್ಯಾಸಗಳು ಮಣ್ಣಿನ ದಿಬ್ಬದ ಮೇಲೆ ನಿಂತಿವೆ. ಈ ವಿನ್ಯಾಸಗಳು ಇತಿಹಾಸಪೂರ್ವ ಕಾಲದಲ್ಲಿ ಅಂತಿಮ ಸಂಸ್ಕಾರ ಮತ್ತು ಧಾರ್ಮಿಕ ಆಚರಣೆ ಗಳನ್ನು ಹೇಗೆ ನಡೆಸಲಾಗುತ್ತಿತ್ತು ಎಂಬುದರ ಕುರಿತು ಒಳನೋಟಗಳನ್ನು ಒದಗಿಸುತ್ತವೆ’. ‘ಇತಿಹಾಸಪೂರ್ವದಲ್ಲಿ ಕೆತ್ತಿರುವ ಗುಹಾ ಚಿತ್ರಗಳೂ ಇಲ್ಲಿ ಇವೆ. ಮಾನವಾಕೃತಿಗಳು, ಕತ್ತಿ ಹಿಡಿದು ಕುದುರೆ ಮೇಲೆ ಕುಳಿತಿರುವ ಮಾನವ, ಜಿಂಕೆ ಹಿಂಡು, ನವಿಲುಗಳ ಚಿತ್ರಗಳನ್ನು ಕೆತ್ತಲಾಗಿದೆ. ಈ ಚಿತ್ರಗಳು ಆ ಕಾಲಘಟ್ಟದಲ್ಲಿ ಆಯುಧಗಳ ಬಳಕೆ ಇತ್ತು ಮತ್ತು ಶಿಕಾರಿ ನಡೆಸಲಾಗುತ್ತಿತ್ತು ಎಂಬ ಕುರಹುಗಳನ್ನು ನೀಡುತ್ತವೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.