ADVERTISEMENT

ಹಿಜಾಬ್‌ಗೆ ಸಂಬಂಧಿಸಿದ ಎಲ್ಲ ರಿಟ್‌ ಅರ್ಜಿಗಳ ವಿಚಾರಣೆ ಶುಕ್ರವಾರ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 1:26 IST
Last Updated 25 ಫೆಬ್ರುವರಿ 2022, 1:26 IST
   

ಬೆಂಗಳೂರು: ಹಿಜಾಬ್‌ ನಿರ್ಬಂಧ ವಿವಾದಕ್ಕೆ ಸಂಬಂಧಿಸಿದ ಎಲ್ಲ ರಿಟ್‌ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ (ಫೆ.25) ಪೂರ್ಣಗೊಳಿಸುವುದಾಗಿ ಹೈಕೋರ್ಟ್‌ ಮೌಖಿಕವಾಗಿ ತಿಳಿಸಿದೆ.

ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ-ಕಾಲೇಜು ಆಡಳಿತ ಮಂಡಳಿಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎಲ್ಲ ರಿಟ್ ಅರ್ಜಿಗಳ ವಿಚಾರಣೆಯನ್ನು, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜೆ.ಎಂ.ಖಾಜಿ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಗುರುವಾರ ಮುಂದುವರಿಸಿತು.

ವಿಚಾರಣೆ ವೇಳೆ ಈ ವಿಷಯ ತಿಳಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ಎಲ್ಲ ಅರ್ಜಿದಾರರು ತಮ್ಮ ಆಕ್ಷೇಪಣೆ ಅಥವಾ ವಾದ ಮಂಡನೆಯ ಅಂಶಗಳನ್ನು ಲಿಖಿತ ರೂಪದಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಬೇಕು’ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದರು.

ADVERTISEMENT

‘ನ್ಯೂ ಹೊರೈಝನ್‌’ ಕಾಲೇಜು ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಬ್ದುಲ್‌ ಮಜೀದ್‌ ದಾರ್,‘ವಿಗ್ರಹಗಳನ್ನು ಅಪವಿತ್ರಗೊಳಿಸಿದರೆ, ಜನರ ಭಾವನೆ ಘಾಸಿಗೊಂಡಿದೆಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಮಸ್ಯೆ ಉಂಟು ಮಾಡಿದೆ ಎನ್ನಬಹುದು. ಆದರೆ, ಮಹಿಳೆಯರು ತಲೆಯನ್ನು ಮುಚ್ಚುವುದು ಯಾವ ರೀತಿಯ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ’ ಎಂದು ನ್ಯಾಯಪೀಠವನ್ನು ಪ್ರಶ್ನಿಸಿದರು.

‘ಭಾರತ ಹಿಂದೂ ಅಥವಾ ಇಸ್ಲಾಮಿಕ್‌ ರಾಷ್ಟ್ರವಲ್ಲ, ಪ್ರಜಾಸತ್ತಾತ್ಮಕ ಜಾತ್ಯತೀತ ಗಣರಾಜ್ಯ. ಇಷ್ಟು ದೊಡ್ಡ ದೇಶಕ್ಕೆ ಸ್ಕಾರ್ಫ್‌ ಒಂದು ಸಣ್ಣ ಸಮಸ್ಯೆ.ಸಮವಸ್ತ್ರಕ್ಕೆ ಸಮಾನವಾದ ಸ್ಕಾರ್ಫ್ ಧರಿಸಿದರೆ, ಯಾವ ಸ್ವರ್ಗ ಕುಸಿಯುತ್ತದೆ, ಸ್ಕಾರ್ಫ್ ಧರಿಸಿದರೆ, ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ’ ಎಂದು ಕೇಳಿದರು.

ಉಡುಪಿ ಪಿಯು ಕಾಲೇಜು ಉಪನ್ಯಾಸಕರ ಪರ ಹಿರಿಯ ವಕೀಲ ಗುರು ಕೃಷ್ಣಕುಮಾರ್, ‘ಸರ್ಕಾರದ ಆಕ್ಷೇಪಾರ್ಹ ಆದೇಶವು ಧಾರ್ಮಿಕ ಹಕ್ಕುಗಳಲ್ಲಿ ಮಧ್ಯಪ್ರವೇಶ ಮಾಡುವ ಉದ್ದೇಶ ಹೊಂದಿಲ್ಲ. ಶಿಕ್ಷಣದಲ್ಲಿ ಜಾತ್ಯತೀತ ಚಟುವಟಿಕೆ ಮುಂದುವರಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆಯೇ ವಿನಾ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದಲ್ಲ. ಹೀಗಾಗಿ, ಅರ್ಜಿದಾರರ ವಾದವನ್ನು ಸಮರ್ಥಿಸಲು ಆಗದು’ ಎಂದರು. ವಿಚಾರಣೆಯನ್ನು ಶುಕ್ರವಾರಕ್ಕೆ (ಫೆ.25) ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.