ADVERTISEMENT

ಪಿಎಸಿ ನಡೆಗೆ ತಡೆ: ಎಚ್‌.ಕೆ.ಪಾಟೀಲ ಕಿಡಿ

ವೈದ್ಯಕೀಯ ಉಪಕರಣ‌ ಖರೀದಿಯಲ್ಲಿ ಅಕ್ರಮ– ದೂರು: ತನಿಖೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 28 ಮೇ 2020, 20:30 IST
Last Updated 28 ಮೇ 2020, 20:30 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಂಗಳೂರು: ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲು ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ(ಪಿಎಸಿ) ನಡೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆಯಾಜ್ಞೆ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಕೊರೊನಾ ನಿಯಂತ್ರಣದ ಉದ್ದೇಶದಿಂದ ಖರೀದಿಸಿದ್ದ ಉಪಕರಣ ಕಳಪೆಯಾಗಿದ್ದು, ದುಬಾರಿ ದರ ನೀಡಿ ಖರೀದಿಸಲಾಗಿದೆ ಎಂದು ಪಿಎಸಿಗೆ ದೂರು ಸಲ್ಲಿಕೆಯಾಗಿತ್ತು. ವಿಚಾರವಾಗಿ ತನಿಖೆ ನಡೆಸಲು ಸಮಿತಿ ನಿರ್ಧರಿಸಿತ್ತು.

ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ಗುರುವಾರ ಭೇಟಿಯನ್ನು ನಿಗದಿ ಮಾಡಲಾಗಿತ್ತು. ಆದರೆ, ವಿಧಾನಸಭಾಧ್ಯಕ್ಷರು ಅನುಮತಿ ನಿರಾಕರಿಸಿರುವುದರಿಂದ ಎಚ್‌.ಕೆ.ಪಾಟೀಲ‌ ಅಧ್ಯಕ್ಷತೆಯ ಪಿಎಸಿ ತನಿಖೆಗೆ ಹಿನ್ನಡೆ ಉಂಟಾಗಿದೆ.

ADVERTISEMENT

ಸಂವಿಧಾನ ಬುಡಮೇಲು ಕೃತ್ಯ: ‘ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲು ವಿಧಾನಸಭಾಧ್ಯಕ್ಷರು ತಡೆ ನೀಡಿರುವುದು ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯ ಬುಡಮೇಲು ಕೃತ್ಯ’ ಎಂದು ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ ಕಿಡಿಕಾರಿದ್ದಾರೆ.

‘ವಿಧಾನಮಂಡಲದ ಸಮಿತಿಗಳ ಅಧಿಕಾರ ಮೊಟಕು ಮಾಡುವ ಪ್ರಯತ್ನವನ್ನು ತಕ್ಷಣ ಕೈಬಿಡಬೇಕು. ಈ ಸಂಬಂಧ ಸಭಾಧ್ಯಕ್ಷರು ಲಘು ಪ್ರಕಟಣೆ 104 ನ್ನು ಹಿಂದಕ್ಕೆ ಪಡೆದು, ಭ್ರಷ್ಟಾಚಾರ ಪೋಷಿಸುವ ಕ್ರಮದ ಆದೇಶವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ಮೇ 19 ಮತ್ತು ಅದಕ್ಕೂ ಮೊದಲುಕೋವಿಡ್-19 ನಿರ್ವಹಣೆಗೆ ಅಗತ್ಯವಿರುವ ಪರಿಕರಗಳು, ಉಪಕರಣಗಳನ್ನು ಖರೀದಿಸುವಲ್ಲಿ ಅವ್ಯವಹಾರ ನಡೆದಿವೆ ಎಂಬ ದೂರುಗಳು ಪಿಎಸಿಗೆ ಸಲ್ಲಿಕೆಯಾಗಿವೆ. 3 ತಿಂಗಳ ಅವಧಿಯಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಮತ್ತು ಸಂದೇಹಾಸ್ಪದ ನಿರ್ವಹಣೆಯ ಬಗ್ಗೆ ಸಾರ್ವಜನಿಕರು ಅನೇಕ ದೂರುಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಡೆಯಾಜ್ಞೆ: ಕಾಗೇರಿ

‘ಲಾಕ್‌ಡೌನ್ ಮಾರ್ಗಸೂಚಿ‌ ಹಿನ್ನೆಲೆಯಲ್ಲಿ ಪಿಎಸಿ ಭೇಟಿಗೆ ತಡೆಯಾಜ್ಞೆ ನೀಡಲಾಗಿದೆ. ಯಾವುದೇ ಸಮಿತಿಯ ಸದಸ್ಯರು ಇರಲಿ ಸಭಾಧ್ಯಕ್ಷರ ಆದೇಶ ಪಾಲಿಸಬೇಕು’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.

‘ಲಾಕ್‌ಡೌನ್‌ ಸಡಿಲಿಕೆ ಆದ ಬಳಿಕ ಈ ಬಗ್ಗೆ ಮರುಪರಿಶೀಲನೆ ನಡೆಸುತ್ತೇನೆ. ಅಲ್ಲಿಯವರೆಗೆ ಆದೇಶವನ್ನು ಪಾಲಿಸಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.