ADVERTISEMENT

ತಾ.ಪಂ.ರದ್ದತಿ: ಸರ್ಕಾರದ ದುರಾಲೋಚನೆ–ಎಚ್‌.ಕೆ.ಪಾಟೀಲ ಕಿಡಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 15:43 IST
Last Updated 10 ಫೆಬ್ರುವರಿ 2021, 15:43 IST
ಎಚ್‌.ಕೆ.ಪಾಟೀಲ, ಶಾಸಕ 
ಎಚ್‌.ಕೆ.ಪಾಟೀಲ, ಶಾಸಕ    

ಗದಗ: ‘ಸರ್ಕಾರ ತಾಲ್ಲೂಕು ಪಂಚಾಯ್ತಿಗಳನ್ನು ರದ್ದುಗೊಳಿಸಬೇಕು ಎಂಬ ದುರಾಲೋಚನೆ ಮಾಡುತ್ತಿದೆ. ಅವುಗಳ ಮಹತ್ವದ ಆಳ-ಅಗಲ ತಿಳಿಯದೇ ಆತುರದ ನಿರ್ಧಾರಮಾಡಬಾರದು’ ಎಂದು ಶಾಸಕ ಎಚ್‌.ಕೆ.ಪಾಟೀಲ ಆಗ್ರಹಿಸಿದರು.

ಗದಗ– ಬೆಟಗೇರಿ ನಗರಸಭೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಅನುಷ್ಠಾನಕ್ಕೆ ಬಂದಿರುವ ತಾಲ್ಲೂಕು ಪಂಚಾಯ್ತಿಗಳನ್ನು ಯಾವ ಕಾರಣಕ್ಕೂ ರಾಜ್ಯ ಸರ್ಕಾರ ರದ್ದುಗೊಳಿಸಲು ಬರುವುದಿಲ್ಲ. ಅಧಿಕಾರಶಾಹಿ ಮನೋಭಾವ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಸರ್ಕಾರಗಳು ತಾಲ್ಲೂಕು ಪಂಚಾಯ್ತಿಗಳನ್ನು ಯಾವ ಎತ್ತರಕ್ಕೆ ಬೆಳೆಸಬೇಕಿತ್ತೋ, ಗಟ್ಟಿಗೊಳಿಸಬೇಕಿತ್ತೋ ಆ ಕೆಲಸವನ್ನು ಮಾಡಲಿಲ್ಲ’ ಎಂದು ಹೇಳಿದರು.

‘ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳನ್ನು ಗಮನಿಸಿ, ಅನುಷ್ಠಾನಗೊಳಿಸುವ ಬಹುದೊಡ್ಡ ಜವಾಬ್ದಾರಿ ತಾಲ್ಲೂಕು ಪಂಚಾಯ್ತಿಗಳಿಗೆ ಇದೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು’ ಎಂದು ಹೇಳಿದರು.

ADVERTISEMENT

‘ತಾಲ್ಲೂಕು ಪಂಚಾಯ್ತಿ ರದ್ದು ಮಾಡಬೇಕೆನ್ನುವುದು ಅಥವಾ ಜಿಲ್ಲಾ ಪಂಚಾಯ್ತಿಗಳ ವ್ಯಾಪ್ತಿ ಹೆಚ್ಚು ಮಾಡುತ್ತೇನೆ ಎನ್ನುವುದೆಲ್ಲವೂ ಸ್ಥಳೀಯ ಸಂಸ್ಥೆಗಳ ಚುವಾವಣೆಯನ್ನು ಮುಂದೂಡುವುದಕ್ಕೆ ಸರ್ಕಾರ ಮಾಡುತ್ತಿರುವ ಹುನ್ನಾರ’ ಎಂದು ಆರೋ‍ಪಿಸಿದರು.

‘ಬದಲಾವಣೆ ಹೆಸರಿನಲ್ಲಿ ಚುನಾವಣೆಗಳನ್ನು ಮುಂದೂಡುವ ಕೆಲಸ ಯಾವ ಕಾಲಕ್ಕೂ ಸಲ್ಲದು. ಇದು ಪಂಚಾಯತ್‌ ರಾಜ್‌ ವ್ಯವಸ್ಥೆಗೆ, ಕಾನೂನಿಗೆ ಅಪಚಾರ ಮಾಡಿದಂತೆ. ಸರ್ಕಾರ ಈ ಪ್ರಯತ್ನ ಮುಂದುವರಿಸಿದ್ದೇ ಆದಲ್ಲಿ ನ್ಯಾಯಾಲಯದಿಂದ ಮತ್ತೊಮ್ಮೆ ಮಂಗಳಾರತಿ ಎತ್ತಿಸಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.