ADVERTISEMENT

ಎಚ್‌ಎಂಟಿ ಭೂವಿವಾದ: ಗೋಕುಲ್‌ ಅಮಾನತು ರದ್ದುಪಡಿಸಿದ ಸಿಎಟಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 16:22 IST
Last Updated 30 ಆಗಸ್ಟ್ 2025, 16:22 IST
   

ನವದೆಹಲಿ: ಎಚ್‌ಎಂಟಿ ಕಂಪನಿಗೆ ನೀಡಿದ ₹ 14 ಸಾವಿರ ಕೋಟಿ ಮೌಲ್ಯದ ಅರಣ್ಯ ಜಮೀನು ಡಿನೋಟಿಫಿಕೇಷನ್‌ಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್‌) ಆರ್. ಗೋಕುಲ್ ಅವರ ಅಮಾನತನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಪಡಿಸಿದೆ. 

ಅಮಾನತು ಆದೇಶ ಪ್ರಶ್ನಿಸಿ ಗೋಕುಲ್‌ ಅವರು ಸಿಎಟಿ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಕೆ.ಶ್ರೀವಾಸ್ತವ ಹಾಗೂ ಸದಸ್ಯ ಸಂತೋಷ್‌ ಮೆಹ್ತಾ ಅವರ ಪೀಠವು ಗೋಕುಲ್‌ ಅವರನ್ನು ಕೂಡಲೇ ಪುನರ್‌ ನೇಮಕ ಮಾಡಬೇಕು ಎಂದು ಸೂಚಿಸಿದೆ. 

ಸಚಿವ ಸಂಪುಟದ ಅನುಮೋದನೆ ಪಡೆಯದೆ ಬೆಂಗಳೂರು ಉತ್ತರ ತಾಲ್ಲೂಕಿನ ಪೀಣ್ಯ ಪ್ಲಾಂಟೇಷನ್‌ನಲ್ಲಿರುವ 443 ಎಕರೆ 6 ಗುಂಟೆ ಜಮೀನನ್ನು ಎಚ್‌ಎಂಟಿ ಕಂಪನಿಗೆ ಡಿನೋಟಿಫಿಕೇಶನ್‌ ಮಾಡಲು ಸುಪ್ರೀಂ ಕೋರ್ಟ್‌ಗೆ 2020ರಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ, ನಿವೃತ್ತ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ, ಪ್ರಧಾನ ಕಾರ್ಯದರ್ಶಿ ಆಗಿದ್ದ ಸ್ಮಿತಾ ಬಿಜ್ಜೂರ್ ಮತ್ತು ಆರ್. ಗೋಕುಲ್ ಅವರಿಗೆ ಅರಣ್ಯ ಇಲಾಖೆ ಪ್ರಾಥಮಿಕ ನೋಟಿಸ್‌ ನೀಡಿತ್ತು. ಸಂದೀಪ್‌ ದವೆ ಹೊರತುಪಡಿಸಿ ಉಳಿದ ಎಲ್ಲರೂ ನೋಟಿಸ್‌ಗೆ ಉತ್ತರ ನೀಡಿದ್ದರು.

ADVERTISEMENT

ಪ್ರಾಥಮಿಕ ನೋಟಿಸ್‌ ನೀಡಿದ ಬೆನ್ನಲ್ಲೇ ಸಿಬಿಐಗೆ ಪತ್ರ ಬರೆದಿದ್ದ ಗೋಕುಲ್‌, ‘ಬೇಲೆಕೇರಿ ಬಂದರಿನಲ್ಲಿ ಕಬ್ಬಿಣದ ಅದಿರು ಕಳ್ಳತನ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸಾಕ್ಷ್ಯ ನುಡಿದ ಕಾರಣಕ್ಕೆ ಎಚ್‌ಎಂಟಿ ಪ್ರಕರಣದಲ್ಲಿ ಬಲಿಪಶು ಮಾಡಿ ಮಾನಹಾನಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದರು. ಗೋಕುಲ್‌ ಅವರನ್ನು ಅಮಾನತು ಮಾಡಿ ಜೂನ್‌ 4ರಂದು ಆದೇಶ ಹೊರಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.