ADVERTISEMENT

HMT ಪುನಶ್ಚೇತನಕ್ಕೆ ಕೇಂದ್ರ ಚಿಂತನೆ: ಸಾರಸ್ವತ್‌ ಜತೆಗೆ ಕುಮಾರಸ್ವಾಮಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 13:13 IST
Last Updated 14 ಆಗಸ್ಟ್ 2025, 13:13 IST
<div class="paragraphs"><p>ವಿ.ಕೆ. ಸಾರಸ್ವತ್‌ ಜತೆಗೆ ಎಚ್‌.ಡಿ.ಕುಮಾರಸ್ವಾಮಿ ಚರ್ಚಿಸಿದರು.&nbsp;</p></div>

ವಿ.ಕೆ. ಸಾರಸ್ವತ್‌ ಜತೆಗೆ ಎಚ್‌.ಡಿ.ಕುಮಾರಸ್ವಾಮಿ ಚರ್ಚಿಸಿದರು. 

   

ನವದೆಹಲಿ: ಕೇಂದ್ರದ ಭಾರಿ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಎಚ್‌ಎಂಟಿ ಲಿಮಿಟೆಡ್‌ ಪುನಶ್ಚೇತನ ಕುರಿತಂತೆ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಸಾರಸ್ವತ್ ಅವರೊಂದಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಚರ್ಚೆ ನಡೆಸಿದರು. 

ಸದೃಢ, ಸ್ವಾವಲಂಬಿ ಉತ್ಪಾದನಾ ವಲಯದ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಮುಖ ಕಾರ್ಯಾಚರಣೆಗಳನ್ನು ಬಲಪಡಿಸುವುದು, ಸೌಲಭ್ಯಗಳನ್ನು ಆಧುನೀಕರಿಸುವುದು, ಉತ್ಪಾದನಾ ಮಾರ್ಗಗಳನ್ನು ಅತ್ಯುತ್ತಮಗೊಳಿಸುವುದು ಮತ್ತು ಮಾರುಕಟ್ಟೆ ವ್ಯಾಪ್ತಿಯನ್ನು ಹಿಗ್ಗಿಸುವ ಕುರಿತು ಉಭಯರು ಚರ್ಚಿಸಿದರು. 

ADVERTISEMENT

ಎಸ್‌ಟಿ ಪ್ರವರ್ಗಕ್ಕೆ ಕಾಡುಗೊಲ್ಲ-ಪರಿಷ್ಕೃತ ಪ್ರಸ್ತಾವಕ್ಕೆ ಸೂಚನೆ

ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಪ್ರವರ್ಗಕ್ಕೆ ಸೇರಿಸಬೇಕೆಂಬ ಬಹುದಿನಗಳ ಬೇಡಿಕೆ ಬಗ್ಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಭು ನಾಯರ್‌ ಅವರೊಂದಿಗೆ ಕುಮಾರಸ್ವಾಮಿ ಸಮಾಲೋಚನೆ ನಡೆಸಿದರು.

ಕರ್ನಾಟಕ ಸರ್ಕಾರ ಈಗಾಗಲೇ ಸಲ್ಲಿಸಿರುವ ಪ್ರಸ್ತಾವದಲ್ಲಿ ಕೆಲ ತಾಂತ್ರಿಕ ಲೋಪಗಳಿದ್ದು, ಅವುಗಳನ್ನು ಸರಿಪಡಿಸಿ ಪರಿಷ್ಕೃತ ಪ್ರಸ್ತಾವ ಸಲ್ಲಿಸಿದರೆ ತಕ್ಷಣವೇ ಪರಿಗಣಿಸಿ ಪರಿಶೀಲಿಸುವುದಾಗಿ ನಾಯರ್‌ ಭರವಸೆ ನೀಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ತಾವು ಸಲ್ಲಿಸಿರುವ ಮನವಿಗಳನ್ನೂ ಪರಿಗಣನೆಗೆ ತೆಗೆದುಕೊಂಡಿದ್ದೇವೆ ಎಂದು ನಾಯರ್‌ ಅವರು ಸಚಿವರಿಗೆ ತಿಳಿಸಿದರು. 

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಕರ್ನಾಟಕ ಸರ್ಕಾರವು 2015ರ ಆಗಸ್ಟ್‌ 17ರಂದು ಶಿಫಾರಸು ಮಾಡಿತ್ತು. ಯಾವುದೇ ಸಮುದಾಯವನ್ನು ಪರಿಶಿಷ್ಟ ಪಂಗಡ ಅಥವಾ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವುದಕ್ಕೆ ಅಥವಾ ಕೈ ಬಿಡುವುದಕ್ಕೆ ಹಾಗೂ ಇತರ ಪರಿಷ್ಕರಣೆಗೆ ಕೇಂದ್ರ ಸರ್ಕಾರ 1999ರಲ್ಲೇ ಕಾರ್ಯವಿಧಾನ ರೂಪಿಸಿದೆ. ಇದರ ಪ್ರಕಾರ, ಯಾವುದೇ ಪ್ರಸ್ತಾವನೆಯನ್ನು ಕುಲಶಾಸ್ತ್ರೀಯ ಅಧ್ಯಯನ ವರದಿಯೊಂದಿಗೆ ರಾಜ್ಯ ಸರ್ಕಾರ ಸಲ್ಲಿಸಬೇಕು. ಇದಕ್ಕೆ ರಿಜಿಸ್ಟ್ರಾರ್ ಜನರಲ್‌ ಆಫ್‌ ಇಂಡಿಯಾ (ಆರ್‌ಜಿಐ) ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಸಹಮತ ವ್ಯಕ್ತಪಡಿಸಬೇಕು. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಆರ್‌ಜಿಐ ಈ ಹಿಂದೆ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.