ADVERTISEMENT

ಕೋಮುವಾದದ ಪ್ರಯೋಗ ಶಾಲೆ ಮಾಡಲು ಪ್ರಯತ್ನ: ನಾಗಮೋಹನದಾಸ್ ಆತಂಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:51 IST
Last Updated 9 ಜೂನ್ 2022, 19:51 IST
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮತ್ತು ಬಿ.ಕೃಷ್ಣಪ್ಪ ಅವರ ಭಾವಚಿತ್ರಗಳಿಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್‌. ನಾಗಮೋಹನದಾಸ್‌, ನಟರಾಜ ಹುಳಿಯಾರ್, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ದಸಂಸ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಇದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮತ್ತು ಬಿ.ಕೃಷ್ಣಪ್ಪ ಅವರ ಭಾವಚಿತ್ರಗಳಿಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್‌. ನಾಗಮೋಹನದಾಸ್‌, ನಟರಾಜ ಹುಳಿಯಾರ್, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ದಸಂಸ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮೂಲಭೂತವಾದವು ಪ್ರಜಾಪ್ರಭುತ್ವವನ್ನು ಅಪ್ರಸ್ತುತಗೊಳಿಸಲು ಹೊರಟಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕವನ್ನು ಕೋಮುವಾದದ ಪ್ರಯೋಗ ಶಾಲೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆತಂಕ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೊ. ಬಿ.ಕೃಷ್ಣಪ್ಪ ಅವರ 84ನೇ ಜನ್ಮದಿನಾಚರಣೆ ಅಂಗವಾಗಿ ‌ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಆಯೋಜಿಸಿದ್ದ ‘ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನ’ ಉದ್ಘಾಟಿಸಿ ಅವರು ಮಾತನಾಡಿದರು.

‘ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ, ಅಪರಾಧೀಕರಣ, ಸಾಂಸ್ಕೃತಿಕ ದಿವಾಳಿತನ ಎಂಬ ಸವಾಲುಗಳು ದೇಶವನ್ನು ಕಾಡುತ್ತಿವೆ. ಈ ಎಲ್ಲಾ ಸವಾಲುಗಳನ್ನು ಎದುರಿಸಲು ಇರುವ ದಾರಿ ಎಂದರೆ ಅದು ಸಂವಿಧಾನ ಮಾತ್ರ. ಸಂವಿಧಾನದಲ್ಲಿ ಯಾವುದೇ ದೋಷಗಳಿಲ್ಲ, ಅದನ್ನು ಜಾರಿಗೆ ತರುವವರಲ್ಲಿ ದೋಷಗಳಿವೆ’ ಎಂದರು.

ADVERTISEMENT

‘ಸಂವಿಧಾನವನ್ನು ಉಳಿಸಲು ಇಂತಹ ಸಮಾವೇಶಗಳು ಹೆಚ್ಚಾಗಿ ನಡೆಯಬೇಕು. ನಮ್ಮ ಹೋರಾಟಗಳು ಅಷ್ಟಕ್ಕೇ ಸೀಮಿತ ಆಗಬಾರದು. ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಸಂಸದರು, ಶಾಸಕರು ದಲಿತರು ಮತ್ತು ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಾಗುತ್ತಿಲ್ಲ. ಅಂತವರು ಮೀಸಲು ಕ್ಷೇತ್ರಗಳಿಂದ ಗೆದ್ದು ಪ್ರಯೋಜನವಿಲ್ಲ. ಅವರ ಮನೆಗಳ ಮುಂದೆ ಹೋರಾಟಗಳನ್ನು ನಡೆಸಬೇಕು’ ಎಂದು ಹೇಳಿದರು.

‘ಪಠ್ಯದಲ್ಲಿ ಸಂವಿಧಾನದ ಸಾರ ಸೇರಿಸಬೇಕು’
‘ಪಠ್ಯಪುಸ್ತಕದಲ್ಲಿ ಜಾತಿಯ ವಿಷಪ್ರಾಶನ ಮಾಡುವ ಬದಲು ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ತನಕ ಸಂವಿಧಾನದ ಎಲ್ಲಾ ಪರಿಚ್ಛೇದಗಳ ಸಾರಾಂಶ ಸೇರಿಸುವುದು ಸೂಕ್ತ’ ಎಂದು ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ನಟರಾಜ್ ಹುಳಿಯಾರ್ ಹೇಳಿದರು.

‘ಜಾತಿಯ ವಿಷ ಪಠ್ಯದಲ್ಲಿ ಸೋಕಬಾರದು ಎಂದು ಬಿ.ಕೃಷ್ಣಪ್ಪ ಹೇಳುತ್ತಿದ್ದರು. ಈಗಿನ ಪಠ್ಯದಲ್ಲಿ ಅದನ್ನೇ ಹೆಚ್ಚಾಗಿ ಸೇರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನದ ಸಾರಾಂಶ ಸೇರ್ಪಡೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಗಳು ಹೋರಾಟ ನಡೆಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.