ADVERTISEMENT

ರಜೆ ಸಮರ: ಸಿ.ಎಂ ಮಧ್ಯಪ್ರವೇಶ ಅನಿವಾರ್ಯ

ಮೇ 6ಕ್ಕೆ ಪಿಯು ತರಗತಿ ಆರಂಭಿಸಲು ಸೂಚನೆ: ಪದವಿ ಪೂರ್ವ ಶಿಕ್ಷಣ ಇಲಾಖೆ–ಉಪನ್ಯಾಸಕರ ನಡುವೆ ಕಗ್ಗಂಟು

ಎಸ್.ರವಿಪ್ರಕಾಶ್
Published 13 ಮಾರ್ಚ್ 2019, 20:16 IST
Last Updated 13 ಮಾರ್ಚ್ 2019, 20:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರ ಬೇಸಿಗೆ ರಜೆ ಕಡಿತ ವಿಷಯದ ಕುರಿತಂತೆ ಇಲಾಖೆ ಮತ್ತು ಉಪನ್ಯಾಸಕರ ನಡುವಿನ ಸಮರಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿಯವರ ಮಧ್ಯ ಪ್ರವೇಶ ಅನಿವಾರ್ಯವಾಗಿದೆ.

ಶಿಕ್ಷಣ ಇಲಾಖೆಗೆ ಪ್ರತ್ಯೇಕ ಸಚಿವರು ಇಲ್ಲದ ಕಾರಣ, ಶಿಕ್ಷಣ ಖಾತೆಯ ಹೊಣೆಯನ್ನು ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಹೊತ್ತುಕೊಂಡಿದ್ದಾರೆ. ಹೀಗಾಗಿ ಕಗ್ಗಂಟು ಬಿಡಿಸುವ ಜವಾಬ್ದಾರಿಯೂ ಈಗ ಅವರ ಹೆಗಲಿಗೇ ಬಿದ್ದಿದೆ.

ಮೇ 6 ರಿಂದ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಬೇಕು ಎಂಬ ಸರ್ಕಾರದ ಆದೇಶವನ್ನು ವಿರೋಧಿಸಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹೋರಾಟದ ‘ಅಸ್ತ್ರ’ವನ್ನು ಕೈಗೆತ್ತಿಕೊಂಡಿದ್ದಾರೆ.

ADVERTISEMENT

ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ, ‘ಉಪನ್ಯಾಸಕರಿಗೆ ವರ್ಷದಲ್ಲಿ 60 ರಜೆಗಳು ಸಿಗುತ್ತವೆ. ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುವುದರಿಂದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದರಲ್ಲೂ ವಿಜ್ಞಾನದ ವಿದ್ಯಾರ್ಥಿಗಳು ಸಿಇಟಿ, ನೀಟ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಹಾಯಕವಾಗುತ್ತದೆ. ಈ ಉದ್ದೇಶದಿಂದ ಮಾತ್ರ ತರಗತಿಗಳನ್ನು ಮೊದಲೇ ಆರಂಭಿಸುತ್ತಿದ್ದೇವೆ’.

ಕಳೆದ ವರ್ಷದಿಂದ ಮೇ ಮೊದಲ ವಾರದಲ್ಲಿ ಪಾಠ ಪ್ರವಚನ ಆರಂಭಿಸಲಾಗಿದೆ. ಇದನ್ನು ಮುಂದುವರಿಸುವ ಸಲುವಾಗಿ ಪ್ರಸ್ತಾವನೆ ಮುಖ್ಯಮಂತ್ರಿಗಳ ಮುಂದಿದೆ. ಅವರು ಒಪ್ಪಿದರೆ ಮುಂದುವರಿಸಲಾಗುತ್ತದೆ. ಇಲ್ಲವಾದರೆ, ಇಲ್ಲ. ಸರ್ಕಾರಿ ಕಾಲೇಜುಗಳಿಗೆ ಬರುವ ಬಡ ವರ್ಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಷ್ಟೇ ಈ ಕ್ರಮ ಕೈಗೊಂಡಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಕಳೆದ ವರ್ಷ ಒಂದು ತಿಂಗಳು ಮೊದಲೇ ತರಗತಿ ಆರಂಭಿಸಿದ್ದರಿಂದ ವಿದ್ಯಾರ್ಥಿಗಳಿಗೆ ಉಪಯೋಗ ಆಗಿದೆಯೇ ಇಲ್ಲವೇ ಎಂಬುದು ಈ ವರ್ಷದ ಫಲಿತಾಂಶದಿಂದ ಗೊತ್ತಾಗಲಿದೆ. ಮೊದಲೇ ತರಗತಿಗಳನ್ನು ಆರಂಭಿಸಿದಾಗ ಸಾಕಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಹಿಂದಿನ ಪದ್ಧತಿಯಲ್ಲಿ ಜೂನ್‌ನಿಂದ ತರಗತಿ ಆರಂಭಿಸಲಾಗುತ್ತಿತ್ತು. ಆರೂವರೆ ತಿಂಗಳು ಮಾತ್ರ ತರಗತಿಗಳು ನಡೆಯುತ್ತಿದ್ದವು. ಇದರಲ್ಲಿ 130 ದಿನಗಳು ಮಾತ್ರ ಕಾರ್ಯಾವಧಿ ದಿನಗಳು. ರಜೆಗಳು, ಪ್ರಿಪ್ರೇಟರಿ, ಪ್ರಾಕ್ಟಿಕಲ್ಸ್‌ ಎಂದು ಸಾಕಷ್ಟು ದಿನಗಳು ಕಡಿತವಾಗುತ್ತಿದ್ದರಿಂದ ಪಾಠಗಳಿಗೆ ಸಿಗುತ್ತಿದ್ದ ದಿನಗಳು ಕಡಿಮೆಯಾಗುತ್ತಿದ್ದವು’ ಎಂದು ಹೇಳಿದರು.

‘ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಮಾಡಿದ್ದಕ್ಕೆ ಭತ್ಯೆ ನೀಡಲಾಗುತ್ತದೆ. ಅಲ್ಲದೇ, ಈ ಕಾರ್ಯಗಳು ಸರ್ಕಾರಿ ಉಪನ್ಯಾಸಕರ ಸೇವೆಯ ಭಾಗ’ ಎಂದು ಅವರು ತಿಳಿಸಿದರು.

ಉಪನ್ಯಾಸಕರ ವಾದವೇನು?: ‘ನಮಗೆ ವರ್ಷದಲ್ಲಿ 60 ದಿನಗಳು ರಜೆ ಸಿಗುವುದು ನಿಜ. 15 ದಿನ ದಸರಾ ರಜೆ ಮತ್ತು 45 ಬೇಸಿಗೆ ರಜೆ ಇರುತ್ತದೆ. ವಾಸ್ತವದಲ್ಲಿ ದಸರಾ ರಜೆಯಲ್ಲಿ ಆಶಾಕಿರಣ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ವಿಶೇಷ ಬೋಧನೆ ಮಾಡಬೇಕಾಗುತ್ತದೆ. ಇನ್ನು ಬೇಸಿಗೆಯಲ್ಲಿ ವಿವಿಧ ಪರೀಕ್ಷೆಗಳು, ಮೌಲ್ಯ ಮಾಪನ ಮತ್ತು ಚುನಾವಣೆ ಇದ್ದಾಗ ಆ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ’ ಎಂದು ಪಿಯು ಉಪನ್ಯಾಸಕ ರಾಜೇಶ್‌ ತಿಳಿಸಿದರು.

‘ಅಲ್ಲದೆ, ವಿವಿಧ ಬಗೆಯ ಸಮೀಕ್ಷೆ ಮತ್ತಿತ್ತರ ಕಾರ್ಯಗಳಲ್ಲಿ ಉಪನ್ಯಾಸಕರನ್ನು ತೊಡಗಿಸಿಕೊಳ್ಳಲಾಗುತ್ತದೆ. ಇವೆಲ್ಲ ಆಗಿ ನಮಗೆ ಸಿಗುವ ರಜೆ 20. ಆದ್ದರಿಂದ, ರಜೆ ರಹಿತ ಇಲಾಖೆಯನ್ನಾಗಿ ಮಾಡುವುದು ಸೂಕ್ತ. ಆಗ ನಮಗೆ 30 ಗಳಿಕೆ ರಜೆ, 20 ಅರ್ಧ ವೇತನ ರಜೆ, ಎರಡನೇ ಶನಿವಾರ ಸಿಗುತ್ತದೆ’ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಮಧ್ಯಪ್ರವೇಶ
ಈ ವಿಷಯವಾಗಿ ಗುರುವಾರ ಅಥವಾ ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜತೆ ಮಾತುಕತೆ ನಡೆಸಿ, ಸಮಸ್ಯೆ ಇತ್ಯರ್ಥಗೊಳಿಸಲಾಗುವುದು. ಮುಖ್ಯಮಂತ್ರಿಯವರ ಮಧ್ಯ ಪ್ರವೇಶ ಅನಿವಾರ್ಯ ಎಂದು ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.

‘ಕುಮಾರಸ್ವಾಮಿಯವರು ಗುರುವಾರ ಮಂಡ್ಯಕ್ಕೆ ಬರುತ್ತಾರೆ. ಸಾಧ್ಯವಾದರೆ ಅಲ್ಲೇ ಮಾತುಕತೆ ಮಾಡುತ್ತೇವೆ. ಇಲ್ಲವಾದರೆ, ಶುಕ್ರವಾರ ಬೆಂಗಳೂರಿನಲ್ಲಿ ಭೇಟಿ ಮಾಡುತ್ತೇವೆ. 60 ವರ್ಷಗಳಿಂದ ಇರುವ ವ್ಯವಸ್ಥೆಯನ್ನು ಏಕಾಏಕಿ ಬದಲಿಸುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ತೊಂದರೆ ಆಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.