ADVERTISEMENT

ಶುರುವಾಗದ ಹೋಂಗಾರ್ಡ್‌ ತರಬೇತಿ ಶಾಲೆ

ಸೌಲಭ್ಯಗಳಿವೆ, ಸಿಬ್ಬಂದಿಯೇ ಇಲ್ಲ

ನಾಗರಾಜ ಎನ್‌
Published 10 ಫೆಬ್ರುವರಿ 2019, 20:15 IST
Last Updated 10 ಫೆಬ್ರುವರಿ 2019, 20:15 IST
ದಾವಣಗೆರೆ ಜಿಲ್ಲೆ ದೇವರಬೆಳಕೆರೆಯಲ್ಲಿ ಸ್ಥಾಪಿಸಿರುವ ಹೋಂಗಾರ್ಡ್‌ ಪ್ರಾದೇಶಿಕ ತರಬೇತಿ ಶಾಲೆ ಆವರಣದಲ್ಲಿರುವ ಪುರುಷರ ವಸತಿ ನಿಲಯ
ದಾವಣಗೆರೆ ಜಿಲ್ಲೆ ದೇವರಬೆಳಕೆರೆಯಲ್ಲಿ ಸ್ಥಾಪಿಸಿರುವ ಹೋಂಗಾರ್ಡ್‌ ಪ್ರಾದೇಶಿಕ ತರಬೇತಿ ಶಾಲೆ ಆವರಣದಲ್ಲಿರುವ ಪುರುಷರ ವಸತಿ ನಿಲಯ   

ದಾವಣಗೆರೆ: ಸುಸಜ್ಜಿತ ಕಟ್ಟಡ, ಪಥಸಂಚಲನ ಮೈದಾನ, ಪೀಠೋಪಕರಣ... ಹೀಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದರೂ ಕೆಲಸ ನಿರ್ವಹಿಸಲು ಒಬ್ಬ ಸಿಬ್ಬಂದಿಯೂ ಇಲ್ಲಿಲ್ಲ!

ಇದು ಜಿಲ್ಲೆಯ ದೇವರಬೆಳಕೆರೆಯಲ್ಲಿ ರಾಜ್ಯ ಸರ್ಕಾರ ನಿರ್ಮಿಸಿರುವ ಗೃಹರಕ್ಷಕ ದಳ ಪ್ರಾದೇಶಿಕ ತರಬೇತಿ ಶಾಲೆಯ ಸದ್ಯದ ಸ್ಥಿತಿ.

7 ಎಕರೆ ಮೈದಾನ, 200 ಮಂದಿಗೆ ಏಕ‌ಕಾಲದಲ್ಲಿ ತರಬೇತಿ ನೀಡಲು ಸಾಮರ್ಥ್ಯವಿರುವ ಸಭಾಂಗಣ, ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆ, ಭೋಜನಾಲಯ ನಿರ್ಮಾಣ ₹ 12 ಕೋಟಿ ವೆಚ್ಚದಲ್ಲಿ ಆಗಿದೆ. 2011ರಲ್ಲಿ ಆರಂಭವಾದ ಕಾಮಗಾರಿಗಳು ಹಂತ ಹಂತವಾಗಿ 2015ರಲ್ಲಿ ಪೂರ್ಣಗೊಂಡಿವೆ. ಆದರೆ, ಇದುವರೆಗೂ ಪ್ರಾದೇಶಿಕ ತರಬೇತಿ ಶಾಲೆ ಕಾರ್ಯಾರಂಭಿಸಿಲ್ಲ.

ADVERTISEMENT

ತರಬೇತಿ ಶಾಲೆಯ ನಿರ್ವಹಣೆಗಾಗಿ 21 ಸಿಬ್ಬಂದಿಯ ಅಗತ್ಯವಿದ್ದು, ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ಗೃಹರಕ್ಷಕ ದಳದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಹಣಕಾಸು ಇಲಾಖೆಯಲ್ಲಿ ಇನ್ನೂ ಅನುಮತಿ ಸಿಗದ ಕಾರಣ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಕಟ್ಟಡ ನಿರ್ಮಿಸಲು, ಸೌಲಭ್ಯ ಒದಗಿಸಲು ತೋರಿಸಿದ ಆಸ್ಥೆಯನ್ನು ಸಿಬ್ಬಂದಿ ನೇಮಕ ಮಾಡುವಲ್ಲಿ ಸರ್ಕಾರ ತೋರಿಸಿಲ್ಲ.

ತರಬೇತಿಗೆ ಹಿನ್ನಡೆ: ಪೊಲೀಸ್‌ ಹಾಗೂ ಇತರ ಕೆಲ ಇಲಾಖೆಗಳಲ್ಲಿ ಗೃಹರಕ್ಷಕರ ಸೇವೆ ಬಳಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಹೀಗಾಗಿ, ಗೃಹರಕ್ಷಕ ದಳದಲ್ಲೂ ನೇಮಕಾತಿ ಪ್ರಮಾಣ ವೃದ್ಧಿಯಾಗಿದೆ. ಬೆಂಗಳೂರಿನಲ್ಲಿರುವ ಗೃಹರಕ್ಷಕ ದಳದ ಕೇಂದ್ರ ಕಚೇರಿ ಆವರಣದಲ್ಲಿ ಹೆಚ್ಚಿನ ಸಿಬ್ಬಂದಿಗೆ ತರಬೇತಿ ನೀಡಲು ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ, ಉತ್ತರ ಕರ್ನಾಟಕ ಭಾಗದ ಹೋಂಗಾರ್ಡ್‌ಗಳಿಗೆ ತರಬೇತಿ ನೀಡುವ ಉದ್ದೇಶದಿಂದ ದೇವರಬೆಳಕೆರೆಯಲ್ಲಿ ಪ್ರಾದೇಶಿಕ ತರಬೇತಿ ಸ್ಥಾಪಿಸಲಾಗಿದೆ. ಇಲ್ಲಿ ಕೇಂದ್ರ ಕಚೇರಿಗಿಂತಲೂ ಉತ್ತಮ ಸೌಲಭ್ಯಗಳಿವೆ. ಆದರೆ, ಸವಲತ್ತುಗಳ ಬಳಕೆಯೇ ಆಗುತ್ತಿಲ್ಲ. ‘ಉತ್ತರ ಕರ್ನಾಟಕ ಭಾಗದಲ್ಲಿ 13 ಸಾವಿರ ಹೋಂಗಾರ್ಡ್‌ಗಳಿದ್ದಾರೆ. ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಹೋಂಗಾರ್ಡ್‌ಗಳನ್ನು ಹೆಚ್ಚಿನದಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ, ಕನಿಷ್ಠ ಮಟ್ಟದ ತರಬೇತಿಯನ್ನಾದರೂ ಅವರಿಗೆ ನೀಡಬೇಕು. ಆದರೆ, ಪ್ರಾದೇಶಿಕ ಕೇಂದ್ರ ಆರಂಭಗೊಳ್ಳದ ಕಾರಣ ಇದು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವೇ ಪೊಲೀಸ್‌ ಸಿಬ್ಬಂದಿಯನ್ನಾದರೂ ಇಲ್ಲಿಗೆ ನಿಯೋಜಿಸಬೇಕು’ ಎಂದು ಒತ್ತಾಯಿಸುತ್ತಾರೆ ಹೋಂಗಾರ್ಡ್‌ ಜಿಲ್ಲಾ ಸಮಾದೇಷ್ಟ ಡಾ. ಬಿ.ಎಚ್‌. ವೀರಪ್ಪ.

‘ದೇವರಬೆಳಕೆರೆಯಲ್ಲಿ ಪಿಕ್‌ಅಪ್‌ ಡ್ಯಾಂ ಇದೆ. ಹೋಂಗಾರ್ಡ್‌ಗಳಿಗೆ ಇಲ್ಲಿ ಪ್ರವಾಹ ರಕ್ಷಣೆಯ ತರಬೇತಿ ನೀಡಲು ಅನುಕೂಲಕರ ವಾತಾವರಣ ಇದೆ. ಪ್ರಾದೇಶಿಕ ಕೇಂದ್ರ ಆರಂಭವಾದರೆ ಹೋಂಗಾರ್ಡ್‌ಗಳಿಗೆ ಪ್ರಥಮ ಚಿಕಿತ್ಸೆ, ಪಥ ಕವಾಯತು, ನಿಸ್ತಂತು ಸಾಧನ ಬಳಕೆ, ಅಗ್ನಿ ಶಮನ, ರಸ್ತೆ ಸುರಕ್ಷತೆ, ವಿಪತ್ತು ನಿರ್ವಹಣೆ, ಕಾನೂನು ಸುವ್ಯವಸ್ಥೆ ಪಾಲನೆ ಬಗ್ಗೆ ಹಂತ ಹಂತವಾಗಿ ತರಬೇತಿ ನೀಡಬಹುದು. ಹೋಂಗಾರ್ಡ್‌ಗಳ ದಕ್ಷತೆ ಹೆಚ್ಚಿಸಬಹುದು’ ಎನ್ನುತ್ತಾರೆ ವೀರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.