ADVERTISEMENT

ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆ ನಿಷೇಧ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 16:06 IST
Last Updated 27 ಡಿಸೆಂಬರ್ 2020, 16:06 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಯ ಮೋಜಿನ ಕೂಟಗಳನ್ನು ನಡೆಸದಂತೆ ನಿಷೇಧ ಹೇರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಿಷೇಧವು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಮತ್ತು ನಗರಕ್ಕೆ ಸೀಮಿತವಾಗಿರುವುದಿಲ್ಲ. ರಾಜ್ಯದ ಯಾವುದೇ ಭಾಗದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಯ ಕೂಟಗಳನ್ನು ಆಯೋಜಿಸಲು, ಜನಜಂಗುಳಿ ಸೇರಲು ಅವಕಾಶ ನೀಡುವುದಿಲ್ಲ’ ಎಂದರು.

ಕ್ಲಬ್‌, ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾರ್ಗಸೂಚಿಯ ಪ್ರಕಾರ ನಿಗದಿತ ಸಂಖ್ಯೆಯ ಜನರು ಮಾತ್ರ ಸೇರಲು ಅವಕಾಶ ನೀಡಲಾಗುವುದು. ಡಿ.ಜೆ. ಬಳಕೆ ಮತ್ತು ಗುಂಪು ನರ್ತನಕ್ಕೆ ಅವಕಾಶ ಇರುವುದಿಲ್ಲ. ಕೋವಿಡ್‌ ನಿಯಂತ್ರಣದ ದೃಷ್ಟಿಯಲ್ಲಿ ಗೃಹ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಲಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಹೊಸ ವರ್ಷಾಚರಣೆಗೆ ಮುಕ್ತ ಅವಕಾಶ ನೀಡಿದರೆ ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಇದೆ. ಬ್ರಿಟನ್‌ನಿಂದ ಆರಂಭಿಕ ಹಂತದಲ್ಲಿ ರಾಜ್ಯಕ್ಕೆ ಬಂದಿರುವ ವ್ಯಕ್ತಿಗಳು ಹಲವೆಡೆ ಓಡಾಡಿರುವ ಸಾಧ್ಯತೆ ಇದೆ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಯ ಪ್ರಕಾರ ಎಲ್ಲರೂ ಮುನ್ನೆಚ್ಚರಿಕೆ ವಹಿಸುವುದು ಕಡ್ಡಾಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.