ಪ್ರಲ್ಹಾದ ಜೋಶಿ ಮತ್ತು ಜಿ. ಪರಮೇಶ್ವರ
ಹುಬ್ಬಳ್ಳಿ: 'ಪ್ರಲ್ಹಾದ ಜೋಶಿ ಅಸಮರ್ಥ ಕೇಂದ್ರ ಸಚಿವ ಎಂದರೆ ಸಮಂಜಸವಾಗುತ್ತದೆಯೇ? ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ' ಎಂದು ಗೃಹ ಸಚಿವ ಜಿ. ಪರಮೇಶ್ವರ ತಿರುಗೇಟು ನೀಡಿದರು.
'ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಕರಣದ ಮಾಹಿತಿ ಪಡೆಯುವಲ್ಲಿ ಗೃಹಸಚಿವರು ಅಸಮರ್ಥರಾಗಿದ್ದಾರೆ' ಎನ್ನುವ ಸಚಿವ ಜೋಶಿ ಹೇಳಿಕೆಗೆ ಮಂಗಳವಾರ ಅವರು ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
'ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಾದ ನಂತರದ ಬೆಳವಣಿಗೆ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ಈಗಾಗಲೇ ಅದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅವರು ವರದಿ ನೀಡಲಿದ್ದಾರೆ. ರವಿ ಅವರು ತಾನು ಅವಾಚ್ಯ ಪದ ಬಳಕೆ ಮಾಡಿಲ್ಲ ಎನ್ನುತ್ತಿದ್ದಾರೆ. ಅಲ್ಲಿ ನಡೆದಿರುವುದೇ ಬೇರೆ ಎಂದು ಇತರರು ಹೇಳುತ್ತಿದ್ದಾರೆ. ಪಕ್ಕದಲ್ಲಿದ್ದ ಪ್ರತ್ಯಕ್ಷ ಸಾಕ್ಷಿಗಳು ಸಹ ಹೇಳಿಕೆ ನೀಡಿವೆ. ಇವೆಲ್ಲ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ' ಎಂದರು.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, 'ಈ ಕುರಿತು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್ ಅವರಿಂದ ವರದಿ ಪಡೆಯುತ್ತೇನೆ. ಆರೋಪದಲ್ಲಿ ಸತ್ಯ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.