ADVERTISEMENT

ಅನಂತ್‌ನಾಗ್‌, ಬಾಳೇಶ ಭಜಂತ್ರಿ, ಶರದ್‌ ಶರ್ಮಗೆ ಗೌರವ ಡಾಕ್ಟರೇಟ್‌

ಬೆಂಗಳೂರು ನಾರ್ಥ್ ವಿವಿಯಿಂದ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 12:29 IST
Last Updated 14 ಜುಲೈ 2022, 12:29 IST
ಅನಂತ್‌ನಾಗ್‌, ಬಾಳೇಶ ಭಜಂತ್ರಿ, ಶರದ್‌ ಶರ್ಮ
ಅನಂತ್‌ನಾಗ್‌, ಬಾಳೇಶ ಭಜಂತ್ರಿ, ಶರದ್‌ ಶರ್ಮ   

ಕೋಲಾರ: ನಟ ಅನಂತ್‌ನಾಗ್, ಶಹನಾಯಿ ವಾದಕ ಪಂಡಿತ್‌ ಬಾಳೇಶ ಭಜಂತ್ರಿ ಹಾಗೂ ಎಂಜಿನಿಯರ್ ಶರದ್‌ ಶರ್ಮ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ.

‘ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಶುಕ್ರವಾರ (ಜುಲೈ 15) ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಗೌರವ ಡಾಕ್ಟರೇಟ್‌ ಹಾಗೂ ಪದವಿ ಪ್ರದಾನ ಮಾಡಲಿದ್ದಾರೆ’ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಾಳೇಶ ಭಜಂತ್ರಿ ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದವರು. ಐದು ದಶಕಗಳಿಂದ ವಿವಿಧ ಭಾಷೆಗಳ 50 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಶಹನಾಯಿ ಸಂಯೋಜನೆ ನೀಡಿದ್ದಾರೆ. ಉಸ್ತಾದ್‌ ಬಿಸ್ಮಿಲ್ಲಾ ಖಾನ್ ಬಳಿ ಅಭ್ಯಾಸ ಮಾಡಿ 40 ವರ್ಷ ಅವರ ಜೊತೆ ಶಹನಾಯಿ ನುಡಿಸಿದ್ದಾರೆ. ಈಚೆಗೆ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದರು’ ಎಂದರು.

‘ಬೆಂಗಳೂರಿನ ಅನಂತ್‌ನಾಗ್‌ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ಹೆಸರು ಮಾಡಿದ್ದಾರೆ. ರಾಜ್ಯದ ಸಾಂಸ್ಕೃತಿಕ ರಂಗಕ್ಕೆ ಅವರ ಕೊಡುಗೆ ಪರಿಗಣಿಸಿ ಗೌರವ ಡಾಕ್ಟರೇಟ್‌ ನೀಡುತ್ತಿದ್ದೇವೆ’ ಎಂದು ಹೇಳಿದರು

ADVERTISEMENT

‘ಬೆಂಗಳೂರಿನಲ್ಲಿ ನೆಲೆಸಿರುವ ಶರದ್‌ ಶರ್ಮ ‘ಐ ಸ್ಪಿರ್ಟ್‌’ ಸಂಸ್ಥೆಯ ಸಹ ಸಂಸ್ಥಾಪಕ. ದೇಶದ ಡಿಜಿಟಲ್‌ ವ್ಯವಹಾರದಲ್ಲಿ ಕ್ರಾಂತಿ ಮಾಡಿರುವ ಯುಪಿಐ ಪೇಮೆಂಟ್‌ ಗೇಟ್‌ವೇ ಯಶಸ್ಸಿನಲ್ಲಿ ಇವರ ಪಾತ್ರವಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಇವರನ್ನು ಈ ಗೌರವಕ್ಕೆ ಪರಿಗಣಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರಿನ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪಾಲ್ಗೊಳ್ಳಲಿದ್ದಾರೆ. 41 ಅಭ್ಯರ್ಥಿಗಳಿಗೆ ಚಿನ್ನದ ಪದಕ ‍ಹಾಗೂ ಒಟ್ಟು 18,064 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.