ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಪರೋಪ ಜೀವಿ ಉತ್ಪಾದನಾ ಪ್ರಯೋಗಾಲಯ: ತೋಟಗಾರಿಕೆ ಸಚಿವರ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 15:46 IST
Last Updated 30 ಜನವರಿ 2026, 15:46 IST
ಎಸ್.ಎಸ್. ಮಲ್ಲಿಕಾರ್ಜುನ್
ಎಸ್.ಎಸ್. ಮಲ್ಲಿಕಾರ್ಜುನ್   

ಬೆಂಗಳೂರು: ತೆಂಗಿನ ಬೆಳೆಗೆ ಬಿಳಿ ನೊಣ ಮತ್ತು ಕಪ್ಪು ತಲೆ ಕಂಬಳಿ ಹುಳುಗಳ ನಿಯಂತ್ರಣಕ್ಕಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಪರೋಪ ಜೀವಿಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸುವ ಪ್ರಯೋಗ ಶಾಲೆ ಸ್ಥಾಪಿಸಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ಅವರು ವಿಧಾನಸಭೆಗೆ ತಿಳಿಸಿದರು.

ಕಾಂಗ್ರೆಸ್‌ನ ರಮೇಶ್ ಬಂಡಿಸಿದ್ದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಗೆ ಪಿಎಂ–ಆರ್‌ಕೆವಿವೈ ಡಿಪಿಆರ್‌ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 74,735 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗಿನ ಬೆಳೆಯನ್ನು ಬೆಳೆಯಲಾಗುತ್ತಿದೆ.  ಬಿಳಿ ನೊಣದಿಂದ 36,268 ಹೆಕ್ಟೇರ್‌ ಮತ್ತು ಕಪ್ಪುತಲೆ ಹುಳುವಿನಿಂದ 5,888 ಹೆಕ್ಟೇರ್‌ ಪ್ರದೇಶವು ಬಾಧೆಗೊಳಗಾಗಿದೆ ಎಂದರು.

ADVERTISEMENT

ಕೀಟ ಬಾಧೆಯಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹35,000ರಂತೆ ಎರಡು ವರ್ಷಗಳ ಅವಧಿಗೆ, ಮೊದಲ ವರ್ಷ ₹17,500 ಮತ್ತು ಎರಡನೇ ವರ್ಷ ₹17,500 ರಂತೆ ಸಹಾಯಧನ ನೀಡಲಾಗುತ್ತದೆ. ರಾಜ್ಯದಲ್ಲಿರುವ 25 ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್‌ ಎಂಬ ಪರೋಪ ಜೀವಿಗಳು ಹಾಗೂ ಐಸಿರಿಯಾ ಜೈವಿಕ ಕೀಟನಾಶಕವನ್ನು ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲಾಗುತ್ತಿದೆ. ಈ ವರ್ಷ ₹1.40 ಕೋಟಿ ಅನುದಾನ ನಿಗದಿಯಾಗಿದೆ. ಮಂಡ್ಯ ಜಿಲ್ಲೆಗೆ ₹18 ಲಕ್ಷ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.