ADVERTISEMENT

ಅವೈಜ್ಞಾನಿಕ ನೀತಿಯಿಂದ ವಿಧಾನಸಭಾ ಕ್ಷೇತ್ರ ಕಳೆದುಕೊಂಡ ಹೊಸನಗರ

ಸಮಾನ ಮನಸ್ಕರ ಸಭೆಯಲ್ಲಿ ಮಾಜಿ ಶಾಸಕ ಸ್ವಾಮಿರಾವ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 2:54 IST
Last Updated 27 ಜನವರಿ 2021, 2:54 IST
ಹೊಸನಗರದಲ್ಲಿ ನಡೆದ ಕ್ಷೇತ್ರ ವಿಂಗಡನೆ ಕುರಿತ ಸಭೆಯಲ್ಲಿ ಶಾಸಕ ಎಚ್‌. ಹಾಲಪ್ಪ ಹರತಾಳು ಮಾತನಾಡಿದರು.
ಹೊಸನಗರದಲ್ಲಿ ನಡೆದ ಕ್ಷೇತ್ರ ವಿಂಗಡನೆ ಕುರಿತ ಸಭೆಯಲ್ಲಿ ಶಾಸಕ ಎಚ್‌. ಹಾಲಪ್ಪ ಹರತಾಳು ಮಾತನಾಡಿದರು.   

ಹೊಸನಗರ: ಕ್ಷೇತ್ರ ವಿಂಗಡಣೆ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಕೈಗೊಂಡ ಅವೈಜ್ಞಾನಿಕ ಕ್ರಮದಿಂದಾಗಿ ಹೊಸನಗರ ಕ್ಷೇತ್ರ ಮಾನ್ಯತೆಯನ್ನು ಕಳೆದುಕೊಳ್ಳುವಂತಾಯಿತು ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಆರೋಪಿಸಿದರು.

ಹೊಸನಗರದ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರು ಆಯೋಜಿಸಿದ್ದ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.

‘ಕ್ಷೇತ್ರ ಮಾನ್ಯತೆ ಕಳೆದುಕೊಂಡ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕು ಬಹುದೊಡ್ಡ ಅನ್ಯಾಯಕ್ಕೆ ಒಳಗಾಗಿದೆ. ಕೇವಲ ಜನಸಂಖ್ಯೆ ಮಾನದಂಡ ಇಟ್ಟುಕೊಂಡು ಕ್ಷೇತ್ರ ವಿಂಗಡನೆ ಮಾಡಿದ್ದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಬೆಂಗಳೂರು ವ್ಯಾಪ್ತಿಯಲ್ಲಿ 28 ಶಾಸಕರು, 4 ಸಂಸದ ಸ್ಥಾನಗಳು ಬರುತ್ತವೆ. ಜನಸಂಖ್ಯೆ ಆಧಾರದ ಮೇಲೆ ಕೇವಲ 4 ಕಿ.ಮೀಗೆ ವಿಸ್ತೀರ್ಣಕ್ಕೆ ಒಂದು ಕ್ಷೇತ್ರವಿದೆ. ಆದರೆ, ಇಲ್ಲಿ 400 ಕಿ.ಮೀ ಇದ್ದರೂ ಕ್ಷೇತ್ರವಿಲ್ಲ. ಈ ಬಗ್ಗೆ ಮತ್ತೆ ಹೋರಾಡಬೇಕಿದೆ. ಸಂಘಟನೆಗಳು ಮುಂದೆ ಬರಬೇಕು’ ಎಂದು ಹೇಳಿದರು.

‘ಅಸ್ಸಾಂ, ಮೇಘಾಲಯ, ಗೋವಾದಂತಹ ರಾಜ್ಯಗಳಲ್ಲಿ ಕೇವಲ 40ರಿಂದ 50 ಸಾವಿರ ಜನಸಂಖ್ಯೆಗೆ ಕ್ಷೇತ್ರ ನೀಡಲಾಗಿದೆ. ಅದೇ ಮಾನದಂಡವನ್ನು ಪಶ್ಚಿಮಘಟ್ಟ ಗುಡ್ಡಗಾಡು ಪ್ರದೇಶ ಹೊಂದಿರುವ ಮಲೆನಾಡಿಗೂ ನೀಡಬೇಕು’ ಎಂದು ಒತ್ತಾಯಿಸಿದರು.

ಸೈಕಲ್ ಮೂಲಕ ದಿಲ್ಲಿಗೆ: ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಮಾತನಾಡಿ, ‘ಕ್ಷೇತ್ರ ಕಳೆದುಕೊಂಡು ಸಾಕಷ್ಟು ವರ್ಷವಾಗಿದೆ. ಈಗ ಸರಿ–ತಪ್ಪುಗಳ ವಿಮರ್ಶೆ ಬೇಡ. ಹೊಸನಗರಕ್ಕೆ ಕ್ಷೇತ್ರ ಮಾನ್ಯತೆ ಬೇಕು. ಈ ನಿಟ್ಟಿನಲ್ಲಿ ಯಾವ ಹೋರಾಟಕ್ಕೂ ಹಿಂಜರಿಯುವುದಿಲ್ಲ. ಮುಂದಿನ ದಿನಗಳಲ್ಲಿ ದೆಹಲಿ ತನಕ ಸೈಕಲ್ ಹೊಡೆದುಕೊಂಡು ಹೋಗಿ ಕ್ಷೇತ್ರದ ಅಗತ್ಯವನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸುತ್ತೇನೆ’ ಎಂದರು.

ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಟೇಲ್ ಗರುಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೀರೇಶ್‌, ವಿರೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಇಲಿಯಾಸ್, ಪ್ರಮುಖರಾದ ಎ.ವಿ.ಮಲ್ಲಿಕಾರ್ಜುನ್, ಬಿ.ಎಸ್.ಸುರೇಶ್, ಮಂಜುನಾಥ ಬ್ಯಾಣದ, ತಾಲ್ಲೂಕಿನ ಹಿರಿಯ ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.