ADVERTISEMENT

ಉಸ್ತುವಾರಿಯೊಬ್ಬರು, ಧ್ವಜಾರೋಹಣಕ್ಕೊಬ್ಬರು: ರಾಜ್ಯ ಸರ್ಕಾರದಿಂದ ವಿಚಿತ್ರ ಆದೇಶ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 12:43 IST
Last Updated 8 ಆಗಸ್ಟ್ 2022, 12:43 IST
ಆನಂದ್‌ ಸಿಂಗ್‌ ಹಾಗೂ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ
ಆನಂದ್‌ ಸಿಂಗ್‌ ಹಾಗೂ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ   

ಹೊಸಪೇಟೆ (ವಿಜಯನಗರ): ಇತ್ತೀಚೆಗೆ ವಿಜಯನಗರ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ, ರದ್ದತಿಯ ಪ್ರಹಸನದ ಬೆನ್ನಲ್ಲೇ ಸರ್ಕಾರ ಮತ್ತೊಂದು ವಿಚಿತ್ರ ಆದೇಶ ಹೊರಡಿಸಿದೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ. 15ರಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಆನಂದ್‌ ಸಿಂಗ್‌ ಅವರಿಗೆ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣಕ್ಕೆ ನೇಮಿಸಿ ಆದೇಶ ಹೊರಡಿಸಿದೆ.

ಇನ್ನು, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರಿಗೆ ಕೊಪ್ಪಳದಲ್ಲಿ ತ್ರಿವರ್ಣ ಧ್ವಜಾರೋಹಣಕ್ಕೆ ನೇಮಕ ಮಾಡಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು ಆನಂದ್‌ ಸಿಂಗ್‌ ಅವರನ್ನು ಕೊಪ್ಪಳದ ಬದಲು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ, ಶಶಿಕಲಾ ಅವರನ್ನು ವಿಜಯನಗರದಿಂದ ಕೊಪ್ಪಳದ ಉಸ್ತುವಾರಿಯಾಗಿ ನೇಮಕ ಮಾಡಿತ್ತು. ಕೆಲವೇ ಗಂಟೆಗಳಲ್ಲಿ ಆ ಆದೇಶವನ್ನು ರದ್ದುಪಡಿಸಿ ಯಥಾಸ್ಥಿತಿ ಕಾಪಾಡಿಕೊಂಡಿತ್ತು. ಆದರೆ, ಈಗ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಸಚಿವರಿಗೆ ಬೇರೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ನೇಮಿಸಿದೆ.

ADVERTISEMENT

ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ₹6 ಕೋಟಿಯಲ್ಲಿ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಲಾಗುತ್ತಿದ್ದು, ದೇಶದಲ್ಲೇ ಅತಿ ದೊಡ್ಡ ಧ್ವಜಸ್ತಂಭ ಇದು ಎಂದು ಹೇಳಲಾಗುತ್ತಿದೆ. ಆ. 15ರಂದು ಧ್ವಜಾರೋಹಣ ಮಾಡಿ ದಾಖಲೆ ನಿರ್ಮಿಸಬೇಕೆನ್ನುವುದು ಆನಂದ್‌ ಸಿಂಗ್‌ ಉಮೇದು. ಅದಕ್ಕಾಗಿಯೇ ತೀವ್ರ ಲಾಬಿ ನಡೆಸಿ, ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿಸಿಕೊಂಡು ಬಂದಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಅವರ ಲೆಕ್ಕಾಚಾರ ತಲೆಕೆಳಗಾಗಿತ್ತು. ಆದರೆ, ಈಗ ಧ್ವಜಾರೋಹಣ ನೆರವೇರಿಸುವ ಅವಕಾಶ ತನ್ನದಾಗಿಸಿಕೊಂಡಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ₹6 ಕೋಟಿ ಅನುದಾನದಲ್ಲಿ ಧ್ವಜ ಸ್ತಂಭ ನಿರ್ಮಿಸುವ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಟೆಂಡರ್‌ ಇಲ್ಲದೇ ಕಾಮಗಾರಿ ಕೈಗೆತ್ತಿಕೊಂಡಿದ್ದರ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಜಿಲ್ಲಾಡಳಿತದ ಕ್ರಮವು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.