ADVERTISEMENT

ಸಮಾಜ ಕಲ್ಯಾಣ ಇಲಾಖೆ |ಹಾಸ್ಟೆಲ್‌ಗಳಿಗೆ ಮಂಚ- ಹಾಸಿಗೆ: ನಿಯಮ ಇಬ್ಬಗೆ

ಚಂದ್ರಹಾಸ ಹಿರೇಮಳಲಿ
Published 6 ಡಿಸೆಂಬರ್ 2025, 23:30 IST
Last Updated 6 ಡಿಸೆಂಬರ್ 2025, 23:30 IST
   

ಬೆಂಗಳೂರು: ಹಾಸ್ಟೆಲ್‌ಗಳಿಗೆ ಮಂಚ ಪೂರೈಸುವ ಗುತ್ತಿಗೆಯನ್ನು ಒಂದು ನಿರ್ದಿಷ್ಟ ಕಂಪನಿಗೆ ಸಿಗುವಂತೆ ಮಾಡಿಕೊಡಲು ಮುಂದಾಗಿರುವ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ವಿರುದ್ಧವಾಗಿ ಟೆಂಡರ್‌ ನಿಯಮವನ್ನೇ ಬದಲಾವಣೆ ಮಾಡಿದೆ.

ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಮಂಚ ಹಾಗೂ ಹಾಸಿಗೆ ಪೂರೈಸಲು ತಲಾ ₹20 ಕೋಟಿ ಮೌಲ್ಯದ ಎರಡು ಪ್ರತ್ಯೇಕ ಟಂಡರ್‌ ಕರೆಯಲಾಗಿದೆ. ಹಾಸಿಗೆಗಳಿಗೆ ಕರೆದಿರುವ ಟೆಂಡರ್‌ ನಿಯಮಗಳನ್ನು ಕಾಯ್ದೆಗೆ ಅನುಗುಣವಾಗಿ ರೂಪಿಸಿದ್ದು, ಮಂಚಗಳ ಪೂರೈಕೆಗೆ ಕೆಲ ನಿಯಮಗಳನ್ನು ಸಡಿಲಿಸುವ ಮೂಲಕ ಇಲಾಖೆ ಇಬ್ಬಗೆಯ ನೀತಿ ಅನುಸರಿಸಿದೆ.

ಸಮಾಜ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಿಗೆ ₹20 ಕೋಟಿ ಮೊತ್ತದಲ್ಲಿ ಎರಡು ಸ್ತರದ (ಟೂ–ಟೈರ್‌) 8,140 ಮಂಚಗಳನ್ನು ಹಾಗೂ ₹20 ಕೋಟಿ ಮೊತ್ತದಲ್ಲಿ 36,300 ಹಾಸಿಗೆಗಳನ್ನು ಪೂರೈಸಲು ಅರ್ಹ ತಯಾರಕರು, ಸರಬರಾಜುದಾರರಿಂದ ಅಕ್ಟೋಬರ್‌ 30ರಂದು ಟೆಂಡರ್‌ ಆಹ್ವಾನಿಸಲಾಗಿದೆ. ಆದರೆ, ಮಂಚ ಹಾಗೂ ಹಾಸಿಗೆಗೆ ಪ್ರತ್ಯೇಕ ನಿಯಮ ರೂಪಿಸಲಾಗಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ವಿರುದ್ಧವಾಗಿ ಮಂಚ ಪೂರೈಕೆಯ ನಿಯಮಗಳನ್ನು ಪ್ರಕಟಿಸಲಾಗಿದೆ.

ADVERTISEMENT

ಯಾವುದೇ ಸಾಮಗ್ರಿಯನ್ನು ಸರಬರಾಜು ಮಾಡಲು ಇ–ಟೆಂಡರ್‌ಗೆ ಅರ್ಜಿ ಸಲ್ಲಿಸುವ ಕಂಪನಿಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸರ್ಕಾರದ ವಿವಿಧ ಸಂಸ್ಥೆಗಳು, ನಿಗಮಗಳಿಗೆ ಟೆಂಡರ್‌ ಮೊತ್ತದ ಶೇ 80ರಷ್ಟು ಮೌಲ್ಯದ ನಿಗದಿತ ಸಾಮಗ್ರಿಗಳನ್ನು ನೇರವಾಗಿ ಪೂರೈಸಿದ ಅನುಭವ ಪ್ರಮಾಣಪತ್ರ ಹೊಂದಿರಬೇಕು. ಆದರೆ, ₹20 ಕೋಟಿ ಮೌಲ್ಯದ ಮಂಚಗಳನ್ನು ಪೂರೈಸಲು ಕರೆದಿರುವ ಟೆಂಡರ್‌ ನಿಯಮದಲ್ಲಿ ಈ ಅಂಶವನ್ನು ಕೈಬಿಟ್ಟು, ಇತರೆ ವಿತರಕರ ಮೂಲಕವೂ ಸಾಮಗ್ರಿಗಳನ್ನು ಪೂರೈಸಿದ ಕಂಪನಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಹಾಸಿಗೆಗಳ ಪೂರೈಕೆಗೆ ಕರೆದ ಟೆಂಡರ್‌ನಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸರ್ಕಾರದ ಸಂಸ್ಥೆಗಳಿಗೆ ನಿಗದಿತ ಸಾಮಗ್ರಿಗಳನ್ನು ನೇರವಾಗಿ ಪೂರೈಸಿದ ಅನುಭವ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. 

ಮಂಚಕ್ಕೆ ಎರಡು ಟೆಂಡರ್‌: 

ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ₹20 ಕೋಟಿ ವೆಚ್ಚದಲ್ಲಿ ಮಂಚ ಪೂರೈಸುವ ಟೆಂಡರ್‌ ಪ್ರಕ್ರಿಯೆಗೆ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಸಮಾಜ ಕಲ್ಯಾಣ ಇಲಾಖೆ ಈ ಮೊತ್ತವನ್ನು ಎರಡು ಭಾಗಗಳಾಗಿ ವಿಂಗಡಿಸಿ ಬೆಳಗಾವಿ, ಕಲಬುರ್ಗಿ ವಿಭಾಗದ ಹಾಸ್ಟೆಲ್‌ಗಳಿಗೆ ₹10 ಕೋಟಿ ಮೌಲ್ಯದಲ್ಲಿ 4,070 ಮಂಚಗಳು ಹಾಗೂ ಮೈಸೂರು, ಬೆಂಗಳೂರು ವಿಭಾಗದ ಹಾಸ್ಟೆಲ್‌ಗಳಿಗೆ ₹10 ಕೋಟಿ ಮೌಲ್ಯದಲ್ಲಿ ಅಷ್ಟೆ ಸಂಖ್ಯೆಯ ಮಂಚಗಳನ್ನು ಪೂರೈಸಲು ಎರಡು ಪ್ರತ್ಯೇಕ ಟೆಂಡರ್‌ ಅಧಿಸೂಚನೆ ಹೊರಡಿಸಿದೆ.

ಯಾವ ಕಾರಣಕ್ಕಾಗಿ ಹಿಂದೆ ₹14.5 ಕೋಟಿ ಮೊತ್ತದ ಟೆಂಡರ್‌ ರದ್ದು ಮಾಡಲಾಗಿತ್ತೋ, ಅದೇ ಕಂಪನಿಗೆ ಅನುಕೂಲ ಮಾಡಿಕೊಡಲು ಟೆಂಡರ್‌ ನಿಯಮವನ್ನೇ ಬದಲಾಯಿಸಲಾಗಿದೆ
ಎಚ್‌.ಅರುಣ್‌, ಮಾಹಿತಿ ಹಕ್ಕು ಕಾರ್ಯಕರ್ತ

ಹಿಂದೆಯೂ ರದ್ದಾಗಿತ್ತು ಟೆಂಡರ್‌ 

ಹಾಸ್ಟೆಲ್‌ಗಳಿಗೆ ಮಂಚಗಳನ್ನು ₹14.5 ಕೋಟಿ ಮೌಲ್ಯದಲ್ಲಿ ಪೂರೈಸಲು ಇದೇ ವರ್ಷದ ಆರಂಭದಲ್ಲಿ  ಟೆಂಡರ್‌ ಕರೆಯಲಾಗಿತ್ತು. ಹಲವು ಅರ್ಹ ಕಂಪನಿಗಳು ಇದ್ದರೂ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಅರ್ಹತೆ ಪಡೆಯದ ‘ಛಾಯ್ಸ್ ಫರ್ನ್‌ ಟೆಕ್‌ ಎಲ್‌ಎಲ್‌ಪಿ’ ಕಂಪನಿಗೆ ಮೊದಲ ಹಂತದಲ್ಲಿ ₹5 ಕೋಟಿ ಮೊತ್ತಕ್ಕೆ ಮಂಚಗಳನ್ನು ಪೂರೈಸಲು ಅವಕಾಶ ನೀಡಲಾಗಿತ್ತು.

ಟೆಂಡರ್‌ ರದ್ದು ಮಾಡಬೇಕು ಎಂದು ಕರ್ನಾಟಕ ಸರ್ಕಾರದ ಉದ್ಯಮ ವಾದ ಬೆಂಗಳೂರು ನಗರ ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ಸೇರಿದಂತೆ ಹಲವು ಕಂಪನಿಗಳು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದವು. ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಿದ್ದ ಸಮಾಜ ಕಲ್ಯಾಣ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಟೆಂಡರ್‌ ರದ್ದುಪಡಿಸಿದ್ದರು. ಸಚಿವ ಸಂಪುಟದ ಅನುಮೋದನೆ ಪಡೆದು ಇ–ಟೆಂಡರ್‌ ಅಧಿಸೂಚನೆ ಹೊರಡಿಸಲು ಸೂಚಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.