ADVERTISEMENT

ಹೋಟೆಲ್‌ ಆಹಾರ ದರ ಹೆಚ್ಚಳ ಸಾಧ್ಯತೆ: ಹೋಟೆಲ್ ಮಾಲೀಕರಿಂದ ಶೀಘ್ರದಲ್ಲೇ ನಿರ್ಧಾರ

ಹೋಟೆಲ್ ಮಾಲೀಕರಿಂದ ಶೀಘ್ರದಲ್ಲೇ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 18:01 IST
Last Updated 1 ಏಪ್ರಿಲ್ 2022, 18:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಕಂಡಿರುವ ಪರಿಣಾಮ ಶೀಘ್ರದಲ್ಲೇ ರಾಜ್ಯದಾದ್ಯಂತ ಹೋಟೆಲ್‌ಗಳಲ್ಲಿ ಆಹಾರಗಳ ದರವೂ ತುಸು ಹೆಚ್ಚಾಗುವ ಸಾಧ್ಯತೆ ಇದೆ.

‘ಸಿಲಿಂಡರ್ ದರ ಏರಿರುವುದಿಂದ ತಿನಿಸುಗಳ ದರ ಹೆಚ್ಚಿಸಲೇಬೇಕು. ರಾಜ್ಯದ ಎಲ್ಲ ಹೋಟೆಲ್‌ಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ದರ ಏರುವ ಸಾಧ್ಯತೆ ಇದೆ’ ಎಂದು ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಡಿಸೆಂಬರ್‌ನಲ್ಲೂ ಎಲ್‌ಪಿಜಿ ದರ ಏರಿಸಿದ್ದರು. ಆದರೆ, ಹೋಟೆಲ್‌ ಮಾಲೀಕರು ದರ ಹೆಚ್ಚಳ ಮಾಡಲಿಲ್ಲ. ಮತ್ತೆ ದರ ಕಡಿಮೆಯಾಗುವ ನಿರೀಕ್ಷೆಯೂ ಸುಳ್ಳಾಗಿದೆ. ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯ’ ಎಂದರು.

ADVERTISEMENT

‘ಉತ್ತರ ಭಾರತ ಶೈಲಿ ಹಾಗೂ ಚೈನೀಸ್‌ ಆಹಾರಗಳ ದರಗಳು ಹೆಚ್ಚಾಗಲಿವೆ. ದೋಸೆ, ಇಡ್ಲಿಯಂತಹ ಸ್ಥಳೀಯ ಶೈಲಿಯ ಆಹಾರಗಳ ದರ ಗರಿಷ್ಠ ₹ 5ರವರೆಗೆ ಹೆಚ್ಚಾಗಬಹುದು. ದರ ಪರಿಷ್ಕರಣೆ ಮಾಡುವಂತೆ ಸಂಘದಿಂದ ಯಾವುದೇ ಸೂಚನೆ ಇಲ್ಲ. ಹೋಟೆಲ್‌ ಮಾಲೀಕರು ತಮ್ಮ ಖರ್ಚು ವೆಚ್ಚಗಳನ್ನು ಅವಲೋಕಿಸಿ, ದರ ಹೆಚ್ಚಳ ಮಾಡಲಿದ್ದಾರೆ’ ಎಂದೂ ಹೇಳಿದರು.

ಏ.4ಕ್ಕೆ ಹೋಟೆಲ್ ಮಾಲೀಕರ ಸಭೆ

‘ಬೆಂಗಳೂರು ಹೋಟೆಲ್‌ಗಳ ಮಾಲೀಕರ ಸಮ್ಮುಖದಲ್ಲಿ ಏ.4ರಂದು ಸಭೆ ನಡೆಯಲಿದೆ. ಅಲ್ಲಿ ಎಷ್ಟು ಪ್ರಮಾಣದಲ್ಲಿ ದರ ಏರಿಸಬೇಕು ಎಂಬುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದ್ದೇವೆ. ದರ ಏರಿಕೆ ಅನಿವಾರ್ಯ’ ಎಂದುಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುಗಾದಿ ನಂತರ ಸರ್ಕಾರ ಹಾಲು, ವಿದ್ಯುತ್‌ ದರಗಳನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದ ಹೋಟೆಲ್‌ಗಳಲ್ಲಿ ಶೇ 10ರವರೆಗೆ ದರ ಏರುವ ಸಾಧ್ಯತೆ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.