ADVERTISEMENT

ಕೆಲವು ನ್ಯಾಯಾಧೀಶರಿಗೆ ಜನಪ್ರಿಯತೆಯ ವ್ಯಸನ: ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಕಳವಳ

ಕೊಲೆ ಸೇರಿ ಎಲ್ಲಾ ಪ್ರಕರಣಗಳಿಗೂ ಜಾಮೀನು| ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಬೇಸರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 0:30 IST
Last Updated 27 ಜುಲೈ 2025, 0:30 IST
<div class="paragraphs"><p>ನ್ಯಾಯಮೂರ್ತಿ ಎಚ್.ಪಿ. ಸಂದೇಶ್</p></div>

ನ್ಯಾಯಮೂರ್ತಿ ಎಚ್.ಪಿ. ಸಂದೇಶ್

   

ರಾಮನಗರ: ಕೆಲವು ನ್ಯಾಯಾಧೀಶರು‌ ಜನಪ್ರಿಯತೆ ಹಿಂದೆ ಬಿದ್ದಿದ್ದಾರೆ. ಕೊಲೆ ಸೇರಿದಂತೆ ಯಾವುದೇ ಪ್ರಕರಣ ಬಂದರೂ ಜಾಮೀನು ಕೊಡುತ್ತಾರೆ ಇಲ್ಲವೇ ಪ್ರಕರಣವನ್ನೇ ಮುಗಿಸುತ್ತಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಜಿಲ್ಲಾ ವಕೀಲರ ಸಂಘ ನಗರದ ಕೋರ್ಟ್ ಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಇಂತಹ ನ್ಯಾಯಾಧೀಶರ ಮಕ್ಕಳನ್ನೇ ಯಾರಾದರೂ ಹೊಡೆದು ಹಾಕಬೇಕು. ಆಗಲೂ ಇವರು ಎರಡೇ ತಿಂಗಳಿಗೆ ಜಾಮೀನು ಕೊಡುತ್ತಾರೆಯೇ’ ಎಂದು ಅವರು ಪ್ರಶ್ನಿಸಿದರು. 

ಹಣವಿದ್ದವರಿಗೆ ಮಾತ್ರ ನ್ಯಾಯ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಸಮಾಜ ನೋಡುವವರು ಯಾರು? ಕಕ್ಷಿದಾರರು ಹೈಕೋರ್ಟ್‌ ಮೊರೆ ಹೋಗಲು ಕಷ್ಟಪಡುತ್ತಾರೆ. ಇನ್ನು ಸುಪ್ರೀಂ ಕೋರ್ಟ್‌ಗೆ ಹೋಗಲು ಎಷ್ಟು‌‌‌ ಜನರಿಗೆ ಸಾಧ್ಯ ಎಂದು ಕೇಳಿದರು.

‘ನ್ಯಾಯ ಬಯಸಿ ಬರುವ ಕಕ್ಷಿದಾರರೇ ನಮಗೆ ದೇವರು. ಅವರು ಕೋರ್ಟ್‌ಗೆ ಬಾರದಿದ್ದರೆ ನಾವೆಲ್ಲರೂ ಅಪ್ರಸ್ತುತ. ಆ ದೇವರಿಗೆ ನ್ಯಾಯದ ಸ್ಪಂದನೆ ಸಿಗದಿದ್ದರೆ ನ್ಯಾಯಾಂಗ ಇದ್ದೂ ವ್ಯರ್ಥ. ಜನಸಾಮಾನ್ಯರು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಚ್ಯುತಿ ಬಾರಬಾರದಂತೆ ನಾವು ನಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಇಂದು ಸ್ಥಿತ್ಯಂತರವಾಗುತ್ತಿದೆ. ದೇಶದ ಅಭ್ಯುದಯಕ್ಕೆ ಮತ್ತು ಸಾಮಾಜಿಕ ಪರಿವರ್ತನೆಗೆ ಕೊಡುಗೆ ನೀಡುವರು ಕಡಿಮೆಯಾಗುತ್ತಿದ್ದಾರೆ. ತಾವೂ ಸಾಮಾಜಿಕ ಎಂಜಿನಿಯರ್‌ಗಳು ಎಂಬುದನ್ನು ವಕೀಲರು ಮರೆತಿದ್ದಾರೆ. ವೃತ್ತಿಗೆ ಹಣದ ಸೋಂಕು ತಗುಲಿದ್ದು, ಎಲ್ಲರೂ ಅದರ ಹಿಂದೆಯೇ ಬಿದ್ದಿದ್ದಾರೆ’ ಎಂದು ನ್ಯಾ. ಸಂದೇಶ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ವಿ. ರೇಣುಕಾ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಮಿಟ್ಟಲ್‌ಕೊಡ್ ಎಸ್‌.ಎಸ್, ನಿರ್ದೇಶಕ ವಿಶಾಲ್ ರಘು ಎಚ್.ಎಸ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಶ್ರೀವತ್ಸ, ಕಾರ್ಯದರ್ಶಿ ತಿಮ್ಮೇಗೌಡ ಟಿ. ಮತ್ತು ಸಂಘದ ಪದಾಧಿಕಾರಿಗಳು ಇದ್ದರು.

‘ಸರಸ್ವತಿ ಇರುವೆಡೆ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ’

‘ನಾನೆಂದೂ ಹಣದ ಹಿಂದೆ ಬಿದ್ದವನಲ್ಲ. ನಾನೇನಾದರೂ ಕಾಸು ಕೊಟ್ಟು ಕೆಲಸ‌ ತೆಗೆದುಕೊಂಡಿದ್ದೇನೆ ಎಂದು ಯಾರಾದರೂ ಹೇಳಿ ನಿರೂಪಿಸಿದರೆ ನೇಣು ಹಾಕಿಕೊಳ್ಳುವೆ’ ಎಂದು ನ್ಯಾ. ಎಚ್‌.ಪಿ. ಸಂದೇಶ್ ಸವಾಲು ಹಾಕಿದರು.

‘ರೈತನ ಮಗನಾದ ನೀನು ಲಕ್ಷ್ಮಿ ಹಿಂದೆ ಬೀಳದೆ, ಸರಸ್ವತಿ ಹಿಂದೆ ಹೋಗು. ಸರಸ್ವತಿ ಇರುವೆಡೆ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ ಎಂದು 1992ರಲ್ಲಿ ನಾನು ವಕೀಲಿಕೆ ಶುರು ಮಾಡಿದಾಗ ನನ್ನ ಸೀನಿಯರ್ ಕೆ. ಅನಂತರಾಮಯ್ಯ ನನಗೆ ಕಿವಿಮಾತು ಹೇಳಿದ್ದರು’ ಎಂದರು.

‘ನಾವು ಸತ್ತಾಗ ಏನೂ ಒಯ್ಯುವುದಿಲ್ಲ. ವಕೀಲರು ಸಮಾಜದ ದನಿಯಾದಾಗಲಷ್ಟೇ ಕರಿ ಕೋಟಿಗೆ ಬೆಲೆ ಬರುತ್ತದೆ. ಆದರೆ, ಇಂದು ಹಿರಿಯ ವಕೀಲರು ಲಕ್ಷಗಟ್ಟಲೆ ಶುಲ್ಕ ವಿಧಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಕೀಲರು ಸನ್ಯಾಸಿಯಂತೆ ಜೀವಿಸಬೇಕು. ಕುದುರೆ ಥರಾ ಕೆಲಸ ಮಾಡಬೇಕು. ವಕೀಲನಿಗೆ ಒಂದು ಕೇಸ್ ತಪ್ಪಿದರೆ ಮತ್ತೊಂದು ಸಿಗುತ್ತದೆ. ಕಕ್ಷಿದಾರನಿಗೆ ನ್ಯಾಯ ಸಿಗದಿದ್ದರೆ ಆತನ ಬದುಕು ಮುಳುಗುತ್ತದೆ.
ಎಚ್.ಪಿ. ಸಂದೇಶ್, ಹೈಕೋರ್ಟ್ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.