ADVERTISEMENT

ಸಿದ್ದರಾಮಯ್ಯ ಹೊಡೆತಕ್ಕೆ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆಯೇ: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2022, 8:04 IST
Last Updated 30 ಏಪ್ರಿಲ್ 2022, 8:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಕುಟುಂಬಗಳಿಗೆ ಧನ ಸಹಾಯ ಮತ್ತು ಆಹಾರದ ಕಿಟ್ ವಿತರಣೆ ವಿಚಾರಕ್ಕೂ, ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

ಹುಬ್ಬಳ್ಳಿಯಲ್ಲಿ ಕಿಟ್ ವಿತರಣೆ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಡಿಕೆಶಿ ನೋಟು, ಸಿದ್ದರಾಮಯ್ಯ ಸೂಟು!, ಸಿದ್ದರಾಮಯ್ಯ ಅವರ ರಾಜಕೀಯ ಹೊಡೆತ ತಾಳಲಾರದೇ ಅಸಹಾಯಕ ಅಧ್ಯಕ್ಷ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆಯೇ?, ಡಿಕೆಶಿ ಅವರೇ, ಹುಬ್ಬಳ್ಳಿ ಗಲಭೆಕೋರರಿಗೆ ಫುಡ್ ಕಿಟ್ ಹಂಚಲು ಹೋದ ಜಮೀರ್ ಅವರಿಗೆ ನೊಟೀಸ್‌ ನೀಡುವುದು ಬಿಟ್ಟು ಅಂತರ ಕಾಯ್ದುಕೊಂಡಿದ್ದೇಕೆ’ #CONgressVsCONgress ಎಂಬ ಹ್ಯಾಷ್‌ ಟ್ಯಾಗ್ ಉಲ್ಲೇಖಿಸಿ ಕಿಡಿಕಾರಿದೆ.

‘ಕೆಪಿಸಿಸಿ ಡಿಕೆಶಿ ಅವರೇ, ಅವರಿಗೂ ನಮಗೂ ಸಂಬಂಧವಿಲ್ಲ ಎಂಬ ಸೋಗಲಾಡಿತನ ಬಿಡಿ. ಆಹಾರ ಕಿಟ್ ಹಂಚಲು ತಯಾರಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೂ ನಿಮ್ಮ ಪಕ್ಷಕ್ಕೂ ಸಂಬಂಧ ಇದೆಯೋ, ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ’ ಎಂದು ಗುಡುಗಿದೆ.

‘ಕಾಂಗ್ರೆಸ್‌ ಶಾಸಕರೊಬ್ಬರನ್ನು ಪ್ರಶ್ನಿಸುವಷ್ಟೂ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷರಿಗೆ ಇಲ್ಲವೇ?, ಜಮೀರ್ ಅವರಿಗೆ ನೋಟಿಸ್ ನೀಡಿದರೆ ಸಿದ್ದರಾಮಯ್ಯ ಬಣದಿಂದ ಆಕ್ರೋಶ ವ್ಯಕ್ತವಾಗುವ ಭಯ ಡಿ.ಕೆ.ಶಿವಕುಮಾರ್‌ ಅವರನ್ನು ಕಾಡುತ್ತಿದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

‘ಡಿ.ಕೆ.ಶಿವಕುಮಾರ್‌ ಅವರೇ, ನಿಮ್ಮ ಸದಾರಮೆ ನಾಟಕವನ್ನು ನಿಲ್ಲಿಸಿ. ಹಿಜಾಬ್‌ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುತ್ತಲೇ ಕಾನೂನು ಹೋರಾಟಕ್ಕೆ ನೇರವಾಗಿ ಸಹಕರಿಸಿದಿರಿ. ಹಿಂದೂ ಕಾರ್ಯಕರ್ತ ಹರ್ಷ ಕೊಲೆಯಾದಾಗ ಅಂತರ ಕಾಯ್ದುಕೊಂಡ ನೀವು ಈಗ ಹುಬ್ಬಳ್ಳಿ ಗಲಭೆಕೋರರಿಗೆ ಆರ್ಥಿಕ ಸಹಾಯ ನೀಡಲು ಹೊರಟಿದ್ದೀರಿ. ಏನಿದೆಲ್ಲ’ ಎಂದು ಬಿಜೆಪಿ ಟೀಕಿಸಿದೆ.

ಡಿಕೆಶಿ ಅವರೇ, ಪಕ್ಷ ಮುನ್ನಡೆಸುವುದಕ್ಕೂ ಸಾಮರ್ಥ್ಯ ಬೇಕು. ಪದೇ ಪದೇ ನಿಮ್ಮ ನಿರ್ದೇಶನಗಳನ್ನು ಉಲ್ಲಂಘಿಸುವ ಸಿದ್ದರಾಮಯ್ಯ ಬಣದ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅಂಜುವ ನೀವು ಅಸಹಾಯಕ ಅಧ್ಯಕ್ಷರೇ ಎಂದು ಬಿಜೆಪಿ ಕುಟುಕಿದೆ.

ಅಧಿಕಾರದಲ್ಲಿದ್ದಾಗ ಸಮಾಜ ಘಾತುಕ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡಿದಿರಿ. ಕಾಂಗ್ರೆಸ್‌ ಪಕ್ಷದ ಕೃಪಾಶೀರ್ವಾದದಿಂದ ಬೆಳೆದ ಅದೇ ಮತಾಂಧರು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಈಗ ತೊಡಗಿಸಿಕೊಂಡಿದ್ದಾರೆ. ನೀವೇ ಬೆಳೆಸಿದ ಸಂಘಟನೆಗಳನ್ನು ಈಗ ನಿಷೇಧಿಸಿ ಎನ್ನುವುದಕ್ಕೆ ಅರ್ಥವಿದೆಯೇ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.