ಬೆಂಗಳೂರು: ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ 23,566 ಪ್ರಕರಣಗಳು ದಾಖಲಾಗಿವೆ.
2021ರಿಂದ 2024ರ ನವೆಂಬರ್ ಅವಧಿಯಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ದೂರುಗಳು ಹೆಚ್ಚು ಬಂದಿವೆ. ಆಯೋಗದಲ್ಲಿ
ನೋಂದಾಯಿಸಲಾಗಿದ್ದ 23,566 ಪ್ರಕರಣಗಳಲ್ಲಿ 11,514 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, 12,045 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ ಎಂದು ಆಯೋಗ ತಿಳಿಸಿದೆ.
2024ರಲ್ಲಿ ಬೆಂಗಳೂರು ನಗರ (1,791), ತುಮಕೂರು (268), ಮೈಸೂರಿನಲ್ಲಿ (238), ಬೆಳಗಾವಿ (175) ಕಲಬುರಗಿ (140) ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದರೆ, ಕೊಡಗು ಜಿಲ್ಲೆಯಲ್ಲಿ 27 ಪ್ರಕರಣಗಳು ದಾಖಲಾಗಿವೆ.
‘ಮಾನವ ಹಕ್ಕುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಜಿಲ್ಲಾ ಕಾರಾಗೃಹಗಳು, ಜಿಲ್ಲಾ ಆಸ್ಪತ್ರೆಗಳು, ವಸತಿನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಲಾಗುತ್ತಿದೆ. ಅಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಜಿಲ್ಲಾ ಕೇಂದ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ಅಲ್ಲಿಯೇ ಇತ್ಯರ್ಥಗೊಳಿಸಲಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ’ ಎಂದು ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶಾಮ್ ಭಟ್ ತಿಳಿಸಿದರು.
‘2023ರ ನವೆಂಬರ್‌ನಿಂದ 2024ರ ನವೆಂಬರ್ ಅವಧಿಯಲ್ಲಿ ಆಯೋಗದಲ್ಲಿ ನೋಂದಣಿಯಾಗಿದ್ದ 10,209 ಪ್ರಕರಣಗಳಲ್ಲಿ 7,182 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದರು.
‘ಈ ಎಲ್ಲ ಪ್ರಕರಣಗಳನ್ನು ಆಯೋಗದ ಪೂರ್ಣ ಮತ್ತು ಏಕಸದಸ್ಯ ಪೀಠಗಳಲ್ಲಿ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಲಾಗಿದೆ. ಆಯೋಗವು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಪ್ರಕರಣಗಳ ತುರ್ತು ಇತ್ಯರ್ಥಕ್ಕಾಗಿ ಆಯಾ ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸುವ ನೂತನ ಪ್ರಯೋಗಕ್ಕೆ ಚಾಲನೆ ನೀಡಿದೆ’ ಎಂದು ವಿವರಿಸಿದರು.
ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳನ್ನು www.hrcnet.nic.in ವೆಬ್‌ಸೈಟ್ ಅಥವಾ ಮಾನವ ಹಕ್ಕುಗಳ ರಕ್ಷಣೆ ಎಂಬ ಮೊಬೈಲ್ ಆ್ಯಪ್ ಮೂಲಕ ನೀಡಬಹುದು.
ಸಹಾಯವಾಣಿ: 1800–4252–3333ಗೂ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.