ADVERTISEMENT

ಕೇಂದ್ರ ತನಿಖಾ ಸಂಸ್ಥೆಯೊಂದರಿಂದ ನೋಟಿಸ್ ಬಂದಿದೆ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 18:30 IST
Last Updated 17 ನವೆಂಬರ್ 2018, 18:30 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಕೇಂದ್ರ ತನಿಖಾ ಸಂಸ್ಥೆಯೊಂದರಿಂದನೋಟಿಸ್ ಬಂದಿದೆ. ಇದರ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ನೋಟಿಸ್ ಗೆ ಉತ್ತರ ಕೊಡಲು ಸಮರ್ಥನಿದ್ದೇನೆ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

‘ಬೇರೆ ಬೇರೆ ಸಂದರ್ಭಗಳಲ್ಲಿ ಇದೇ ಸಂಸ್ಥೆ ನನ್ನಿಂದ ‌ಉತ್ತರ ಪಡೆದುಕೊಂಡಿದೆ. ಈಗ ಬಂದಿರುವ ನೋಟಿಸ್‌ಗೂ ನಾನು ಉತ್ತರ ಕೊಡುತ್ತೇನೆ’ ಎಂದರು.

ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ಹತ್ತು ತಿಂಗಳಲ್ಲೆ ಆ ಕೆಲಸ ಆರಂಭವಾಗಿದೆ. ಈಗಲೂ ಮುಂದುವರೆದಿದೆ. ದುರುದ್ದೇಶದಿಂದ ನನಗೆ ನೋಟಿಸ್ ಕೊಟ್ಟಿದ್ದಾರೆ ಎಂಬ ಬಗ್ಗೆ ಏನೂ ಹೇಳುವುದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದೂ ನಾನು ಹೇಳುವುದಿಲ್ಲ. ಎಂದರು.

ADVERTISEMENT

'ಬಳ್ಳಾರಿ ಜನರು ಅವರಿಗೆ ಬೇಕಾದವರನ್ನು ಗೆಲ್ಲಿಸಿಕೊಂಡಿದ್ದಾರೆ. ಜನತೆಗೆ ನಾನು ಬಹಳಷ್ಟು ವಿಚಾರಗಳನ್ನು ಹೇಳಬೇಕಿದೆ. ಸಮಯ ಬಂದಾಗ ಆ ಎಲ್ಲ ವಿಷಯಗಳನ್ನು ಹೇಳುತ್ತೇನೆ' ಎಂದರು,

ಅಧಿಕಾರಿಗಳ ಅಮಾನತು

'ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ವರ್ಗಾವಣೆಗೊಂಡರೂ ವರದಿ ಮಾಡಿಕೊಳ್ಳದ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ' ಎಂದು ಶಿವಕುಮಾರ್ ತಿಳಿಸಿದರು.

ಆರು ಅಧಿಕಾರಿಗಳನ್ನು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು. ಜಲ ಸಂಪನ್ಮೂಲ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನರಸಿಂಹ ರಾಜು ಸೇರಿದಂತೆ ಆರು ಎಂಜಿನಿಯರ್ ಗಳ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

'ನನಗೆ ಮುಖ್ಯಮಂತ್ರಿ ಆಗುವ ಅರ್ಜೆಂಟ್ ಇಲ್ಲ. ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ದ ಎಂಬ ಜಿ. ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಆಸೆ ಎಲ್ಲರಿಗೂ ಇರುತ್ತೆ ಅದು ತಪ್ಪಲ್ಲ. ಐದು ವರ್ಷಗಳ ಕಾಲ ಜೆಡಿಎಸ್ ಗೆ ಮುಖ್ಯಮಂತ್ರಿ ಹುದ್ದೆಯನ್ನು ಬರೆದು ಕೊಟ್ಟಿದ್ದೇವೆ. ಆ ಮಾತಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ನನಗಂತೂ ಈ ಹುದ್ದೆ ವಿಚಾರದಲ್ಲಿ ಅರ್ಜೆಂಟ್ ಇಲ್ಲ. ಅವರ ಅಭಿಪ್ರಾಯದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ' ಎಂದರು.

ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಮಾವೇಶ

'ಇದೇ 19ರಂದು ಬಳ್ಳಾರಿಯಲ್ಲಿ ಕೆಡಿಪಿ ಸಭೆ ಇದೆ. ‌22ರಂದು ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. 23ರಂದು ಜಮಖಂಡಿಯಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.