ADVERTISEMENT

ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ: ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 13:57 IST
Last Updated 7 ಜುಲೈ 2020, 13:57 IST
ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ
ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ನ್ಯಾಯಾಲಯದಲ್ಲಿರುವ ಕುಕ್ಕರ್‌ ಹಂಚಿಕೆ ವಿಷಯದ ಬಗ್ಗೆ ಮಾತನಾಡಿರುವ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದ್ದೇನೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯೆ ನೀಡಿದ್ದಾರೆ.

‘ಡಿಸಿಸಿ ಚುನಾವಣೆಯಲ್ಲಿ ಹಣ ಹಂಚುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಹರ್ಷ ಶುಗರ್ಸ್ ಕಾರ್ಖಾನೆ ಆರಂಭಿಸಿದಾಗ ಪ್ರಚಾರಕ್ಕಾಗಿ ಅಧಿಕೃತವಾಗಿಯೇ ಕುಕ್ಕರ್ ವಿತರಿಸಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲ ಲೆಕ್ಕ ಹಾಗೂ ದಾಖಲೆಗಳು ಇವೆ. ಜಿ.ಎಸ್.ಟಿ ಕೂಡ ತುಂಬಿದ್ದೇನೆ. ರಮೇಶ ಜಾರಕಿಹೊಳಿ ತಮ್ಮ ದುಡ್ಡಿನಿಂದ ಕುಕ್ಕರ್ ವಿತರಿಸಿದ್ದರೆ ಅದಕ್ಕೆ ಸೂಕ್ತ ದಾಖಲೆ ಮತ್ತು ಲೆಕ್ಕ ಕೊಡಲಿ’ ಎಂದು ಸವಾಲು ಹಾಕಿದ್ದಾರೆ.

ADVERTISEMENT

‘ಗೋಕಾಕದ ಜನರು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎನ್ನುವ ಕಾರಣಕ್ಕೆ ಇವರಿಗೆ ಮತ ನೀಡಿದ್ದಾರೆಯೇ ವಿನಃ ಇವರ ಮುಖ ನೋಡಿ ಅಲ್ಲ. ಇನ್ನಾದರೂ ಮದ, ಗರ್ವ, ಜಂಬ, ಅಹಂಕಾರ ಬಿಟ್ಟು ಜವಾಬ್ದಾರಿಯಿಂದ ಇವರು ನಡೆದುಕೊಳ್ಳಲಿ’ ಎಂದು ಟಾಂಗ್ ನೀಡಿದ್ದಾರೆ.

‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದುಡ್ಡು ಹಂಚುತ್ತೇನೆ ಎನ್ನುತ್ತಿರುವ ರಮೇಶ ಜಾರಕಿಹೊಳಿ ಅವರು ತಮ್ಮ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಬಿಲ್‌ ಪಾವತಿಸಲಿ. ಕಬ್ಬಿನ ಬಿಲ್ ಸಿಗದೆ ಬೆಳಗಾವಿ, ಕಿತ್ತೂರು, ಬೈಲಹೊಂಗಲ ತಾಲ್ಲೂಕಿನ ರೈತರು ಸಾಯುತ್ತಿದ್ದಾರೆ. ಸಂತಿ ಬಸ್ತವಾಡ, ವಿರಕಿನಕೊಪ್ಪಗಳಲ್ಲಿ ಸೇರಿದಂತೆ ಅನೇಕ ಕಡೆ ರೈತರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಅವರ ಬಾಕಿ ತೀರಿಸಲಿ. ಜನರು ದಡ್ಡರಲ್ಲ, ಇವರ ಎಲ್ಲ ಹೇಳಿಕೆ, ವರ್ತನೆಗಳನ್ನು ಗಮನಿಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.