ADVERTISEMENT

ನನ್ನ ವಿರುದ್ಧ ನೋಟಿಸ್‌ ಕೊಟ್ಟರೆ ರಾಜೀನಾಮೆ ನೀಡಿ ಮನೆಗೆ: ಸಭಾಪತಿ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:40 IST
Last Updated 1 ಮಾರ್ಚ್ 2025, 14:40 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ‘ಒಂದೊಮ್ಮೆ ನನ್ನ ವಿರುದ್ಧ ನೋಟಿಸ್‌ ಕೊಟ್ಟರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ. ನನಗೆ ಅಧಿಕಾರದ ವ್ಯಾಮೋಹ ಇಲ್ಲ’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾನ್ಯ ಕುಟುಂಬದಿಂದ ಬಂದು ಶಿಕ್ಷಕನಾಗಿದ್ದ ನಾನು ಸಚಿವನಾಗಿ, ಸಭಾಪತಿಯಂಥ ಉನ್ನತ ಹುದ್ದೆಯಲ್ಲಿದ್ದೇನೆ. ನನಗೆ ಈ ಬಗ್ಗೆ ತೃಪ್ತಿ ಇದೆ’ ಎಂದರು.

‌‘ಇದೇ 3ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ಮಧ್ಯಾಹ್ನ 3 ಗಂಟೆಗೆ ಜಂಟಿ ಕಲಾಪ ಸಲಹಾ ಸಮಿತಿ ಸಭೆ ನಡೆಸುವಂತೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ’ ಎಂದರು.

ADVERTISEMENT

‘ಮಾದಕ ವಸ್ತುಗಳಿಗೆ ಮಕ್ಕಳು ಬಲಿಯಾಗುತ್ತಿರುವ ಮತ್ತು ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ಕುರಿತು ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಒತ್ತು ನೀಡಲಾಗುವುದು. ಬೆಂಗಳೂರು ನಗರದ ಅಭಿವೃದ್ಧಿ ಕುರಿತು ಚರ್ಚೆಗೆ ಪರಿಷತ್‌ ಸದಸ್ಯ ಎಚ್​. ವಿಶ್ವನಾಥ್ ಪ್ರಸ್ತಾವ ಕೊಟ್ಟಿದ್ದಾರೆ. ಈ ವಿಷಯದ ಕುರಿತು ವಿಚಾರ ಸಂಕಿರಣ ಏರ್ಪಡಿಸುವ ಚಿಂತನೆಯಿದೆ. ಕಲಾಪವನ್ನು ಸುಗಮವಾಗಿ ನಡೆಸುವ ಬಗ್ಗೆ ವಿರೋಧ ಪಕ್ಷಗಳ ಸದಸ್ಯರ ಜೊತೆಗೂ ಚರ್ಚೆ ಮಾಡಿದ್ದೇನೆ’ ಎಂದರು.

‘ಮಂಡಿಸುವ ಮಸೂದೆಗಳನ್ನು ಮುಂಚಿತವಾಗಿ ಕಳುಹಿಸದಿದ್ದರೆ ಚರ್ಚೆಗೆ ತೆಗೆದುಕೊಳ್ಳುವುದಿಲ್ಲವೆಂದು ಸ್ಪಷ್ಟವಾಗಿ ಸರ್ಕಾರಕ್ಕೆ ತಿಳಿಸಿದ್ದೇನೆ. ಅಧಿಕಾರಿಗಳು ಯಾರ ಮಾತು ಕೇಳುತ್ತಾರೋ, ಕೇಳುವುದಿಲ್ಲವೋ ಗೊತ್ತಾಗುತ್ತಿಲ್ಲ. ವಿಧಾನಸಭೆಯಲ್ಲಿ ಬೆಳಿಗ್ಗೆ, ಪರಿಷತ್ತಿನಲ್ಲಿ ಸಂಜೆ ಮಸೂದೆಗಳ ಕುರಿತು ಚರ್ಚೆ ಎಂಬ ವಾತಾವರಣವಿದೆ. ಇದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಶಾಸಕರ ವಿಶ್ರಾಂತಿಗೆ ಆರಾಮ ಕುರ್ಚಿ ವ್ಯವಸ್ಥೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಪರಿಷತ್‌ನಲ್ಲಿ ಸದಸ್ಯರು ಮಧ್ಯಾಹ್ನ ಭೋಜನದ ನಂತರವೂ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಆರಾಮ ಕುರ್ಚಿ ವ್ಯವಸ್ಥೆ ಒದಗಿಸುವ ಪರಿಸ್ಥಿತಿ ಬಂದಿಲ್ಲ. ಇನ್ನೊಂದು ಸದನದ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ’ ಎಂದರು.

- ‘ಲಕ್ಷ್ಮಿ–ರವಿ ಮಧ್ಯೆ ಸಂಧಾನಕ್ಕೆ ಯತ್ನ’

‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಸಿ.ಟಿ. ರವಿ ಇಬ್ಬರನ್ನೂ ಕರೆಸಿ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತೇವೆ’ ಎಂದು ಬಸವರಾಜ ಹೊರಟ್ಟಿ ಹೇಳಿದರು. ‘ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಸಿ.ಟಿ. ರವಿ ನಡುವೆ ನಡೆದ ಘಟನೆಯ ವಿಚಾರಣೆಯು ಪರಿಷತ್‌ ಸದಸ್ಯ ಪಿ.ಎಚ್. ಪೂಜಾರ್ ಅಧ್ಯಕ್ಷತೆಯ ನೀತಿ ನಿರೂಪಣಾ ಸಮಿತಿಯ ಮುಂದೆ ಇದೆ. ಮಾತುಕತೆ ಸಾಧ್ಯವಾಗದೇ ಇದ್ದರೆ ಈ ಸಮಿತಿ ನೀಡುವ ವರದಿಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.