ADVERTISEMENT

ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದರೆ ನಮಗೂ ಬೇಡ: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 23:17 IST
Last Updated 13 ಮಾರ್ಚ್ 2023, 23:17 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಂಗಳೂರು: ‘ಎಲ್ಲರಿಗೂ ಮಕ್ಕಳು ಎಂದರೆ ಪ್ರೀತಿ ಇದ್ದೇ ಇರುತ್ತೆ. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದರೆ ನಮಗೂ ಬೇಡ’ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಬಿಜೆಪಿಯಿಂದ ಮುನಿಸಿಕೊಂಡಿರುವ ಸೋಮಣ್ಣ, ಕಾಂಗ್ರೆಸ್‌ ಕಡೆಗೆ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಆದರೆ, ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕಲ್ಲವೇ? ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ. ನನಗೆ ಅಸಮಾಧಾನ ಇದೆ ಎಂದು ಎಲ್ಲಾದರೂ ಹೇಳಿದ್ದೇನಾ’ ಎಂದು ಪ್ರಶ್ನಿಸಿದರು.

‘ಏನು ಹೇಳಬೇಕು, ಎಲ್ಲಿ ಹೇಳಬೇಕೋ ಹೇಳಿದ್ದೇನೆ. ಕವಲುದಾರಿಗಳು ಇರುತ್ತವೆ. ನಾನೇನು ಸನ್ಯಾಸಿ ಅಲ್ಲ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ನಾವೆಲ್ಲ ಸ್ನೇಹಿತರು. ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಕೆಲಸ ಅವರು ಮಾಡುತ್ತಾರೆ. ನನ್ನ ಕೆಲಸ ನಾನು ಮಾಡುತ್ತೇನೆ’ ಎಂದರು.

ADVERTISEMENT

‘ನನ್ನನ್ನು ಬೆಂಗಳೂರಿಗೆ ಮಾತ್ರ ಏಕೆ ಸೀಮಿತ ಮಾಡುತ್ತೀರಾ’ ಎಂದು‌ ಪ್ರಶ್ನಿಸಿದ ಸೋಮಣ್ಣ, ‘ನನಗೆ ಕೊಟ್ಟ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ಉಪ ಚುನಾವಣೆಗಳ ಜವಾಬ್ದಾರಿ, ತುಮಕೂರು ಲೋಕಸಭೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇನೆ. ನಾನು ಮೊದಲು ಕಾಂಗ್ರೆಸ್‍ನಲ್ಲೇ ಇದ್ದೆ. ಜನತಾಪಕ್ಷ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ. ನನ್ನ ಮಗನಿಗೆ ಟಿಕೆಟ್ ಕೇಳಿದ್ದೇನಾ? ಅಭಿಮಾನಿಗಳು ಸಭೆ ಮಾಡಿದರೆ ನಾನು ಮಾಡಬೇಡಿ ಎಂದು ಹೇಳುವುದಕ್ಕೆ ಆಗುತ್ತದೆಯೇ? ನಾಲ್ಕು ಗೋಡೆ ಮಧ್ಯೆ ಯಾರಿಗೆ ಏನು ಹೇಳಬೇಕು ಹೇಳಿದ್ದೇನೆ’ ಎಂದರು.

*

ವಿ. ಸೋಮಣ್ಣ ನಮ್ಮ ಜೊತೆಯೇ ಇದ್ದಾರೆ. ಮುಂದೆಯೂ ಇರುತ್ತಾರೆ. ಹುಬ್ಬಳ್ಳಿಯಲ್ಲಿ ಭಾನುವಾರ ಅವರ ಜೊತೆ ಮಾತುಕತೆ ನಡೆದಿಲ್ಲ.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.