ADVERTISEMENT

ಪಟ್ಟಾ ಜಮೀನಿದ್ದರೆ, ಅರಣ್ಯ ಭೂಮಿ ಸಿಗದು: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 15:37 IST
Last Updated 2 ಫೆಬ್ರುವರಿ 2025, 15:37 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ಪಟ್ಟಾ ಜಮೀನು (ಕಂದಾಯ ಜಮೀನು) ಹೊಂದಿದ್ದೂ ಅರಣ್ಯ ಹಕ್ಕು ಕಾಯ್ದೆ ಅಡಿ ಭೂಮಿಗಾಗಿ ಅರ್ಜಿ ಸಲ್ಲಿಸಿದ್ದರೆ, ಅಂತಹ ಅರ್ಜಿಗಳನ್ನು ಕೈಬಿಡುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘2005ರ ಡಿಸೆಂಬರ್ 13ಕ್ಕೂ ಮುನ್ನ ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಬಳಸುತ್ತಿದ್ದು ಮತ್ತು ಅರಣ್ಯದಲ್ಲಿ ವಾಸವಿರುವವರ ಅನುಕೂಲಕ್ಕಾಗಿ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಆಹ್ವಾನಿಸಲಾಗಿದೆ. ಅದು ದುರ್ಬಳಕೆ ಆಗಬಾರದು’ ಎಂದು ಸೂಚಿಸಿದ್ದಾರೆ.

‘ಅರ್ಜಿ ಸಲ್ಲಿಸಿರುವವರಲ್ಲಿ ಹಲವರು ಪಟ್ಟಾ ಜಮೀನು ಹೊಂದಿರುವುದು ಪತ್ತೆಯಾಗಿದೆ. ಹೀಗಾಗಿ ಅರ್ಜಿ ಸಲ್ಲಿಸುವವರು ಸೂಚಿತ ದಿನಾಂಕಕ್ಕಿಂತ (2005ರ ಡಿಸೆಂಬರ್ 13) ಮೊದಲು ಪಟ್ಟಾ ಜಮೀನು ಮತ್ತು ಅರಣ್ಯ ಜಮೀನು ಸೇರಿ 3 ಎಕರೆಗಿಂತ ಹೆಚ್ಚು ಜಮೀನು ಹೊಂದಿಲ್ಲ ಎಂದು ಸ್ವಯಂಘೋಷಣಾ ಪತ್ರ ನೀಡಬೇಕು. ಅವರ ಕುಟುಂಬದವರ ಹೆಸರಿನಲ್ಲೂ ಜಮೀನು ಇರಬಾರದು’ ಎಂದು ಹೇಳಿದ್ದಾರೆ.

ADVERTISEMENT

‘ಅರ್ಜಿ, ದಾಖಲೆ ಮತ್ತು ಘೋಷಣೆ ಪತ್ರಗಳನ್ನು ಪರಿಶೀಲಿಸಬೇಕು. ‘ನಮೂನೆ-ಎ’ಯಲ್ಲಿರುವ ಅಂಶಗಳನ್ನು ಕಡ್ಡಾಯವಾಗಿ ಮತ್ತು ನಿಯಮಾನುಸಾರ ಪರಿಶೀಲಿಸಬೇಕು. ಸುಳ್ಳು ಮಾಹಿತಿ ನೀಡಿರುವವರ ಅರ್ಜಿಗಳನ್ನು ಕೈಬಿಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.