ADVERTISEMENT

ಐಐಎಂಬಿ: ಇದೇ ಮೊದಲ ಬಾರಿ ಪದವಿ ತರಗತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 15:22 IST
Last Updated 14 ಜುಲೈ 2025, 15:22 IST
   

ಬೆಂಗಳೂರು: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌–ಬೆಂಗಳೂರು (ಐಐಎಂಬಿ) 2026-27ನೇ ಶೈಕ್ಷಣಿಕ ಸಾಲಿನಿಂದ ಪದವಿ ತರಗತಿಗಳನ್ನು ಆರಂಭಿಸುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಇರುವ ಹೊಸ ಕ್ಯಾಂಪಸ್‌ನಲ್ಲಿ ನಾಲ್ಕು ವರ್ಷಗಳ ಬಿ.ಎಸ್‌ಸಿ ಪದವಿ ಆರಂಭಿಸಲಾಗುತ್ತಿದ್ದು, ಅರ್ಥಶಾಸ್ತ್ರ ಮತ್ತು ದತ್ತಾಂಶ ವಿಜ್ಞಾನ ವಿಷಯಗಳನ್ನು ಮೊದಲ ವರ್ಷ ಪರಿಚಯಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮೂರು ವರ್ಷಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ನಿರ್ಗಮನ ಆಯ್ಕೆ ನೀಡಲಾಗಿದೆ.

ಅರ್ಥಶಾಸ್ತ್ರದಲ್ಲಿ ಸಾರ್ವಜನಿಕ ನೀತಿ, ಅಭಿವೃದ್ಧಿ ಅರ್ಥಶಾಸ್ತ್ರ, ಅಲ್ಗಾರಿದಮಿಕ್ ಗೇಮ್‌, ಪರಿಸರ ಅರ್ಥಶಾಸ್ತ್ರ, ಆರೋಗ್ಯ ಅರ್ಥಶಾಸ್ತ್ರ ಹಾಗೂ ದತ್ತಾಂಶ ವಿಜ್ಞಾನದಲ್ಲಿ ಪರಿಮಾಣಾತ್ಮಕ ಅಪಾಯ ನಿರ್ವಹಣೆ, ಪೂರೈಕೆ ಸರಪಳಿ, ದತ್ತಾಂಶ ಕಂಪ್ಯೂಟಿಂಗ್‌ ಮೊದಲಾದ ಹಲವು ಆಯ್ಕೆಗಳಿರುತ್ತವೆ ಎಂದು ಐಐಎಂಬಿ ನಿರ್ದೇಶಕ ರಿಷಿಕೇಶ ಟಿ. ಕೃಷ್ಣನ್‌ ಹೇಳಿದರು.

ADVERTISEMENT

ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ದ್ವಿತೀಯ ಪಿಯುನಲ್ಲಿ ಗಣಿತವನ್ನು ಅಧ್ಯಯನ ಮಾಡಿರುವುದು ಕಡ್ಡಾಯ. ಪ್ರತಿ ವಿಷಯಕ್ಕೂ 40 ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ. ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ವಾರ್ಷಿಕ ಶುಲ್ಕ  ₹8.5 ಲಕ್ಷ ನಿಗದಿ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.