ADVERTISEMENT

ಎತ್ತಿನಹೊಳೆ | ಅಕ್ರಮ ಕಾಮಗಾರಿ: ತಪ್ಪೊಪ್ಪಿದ ರಾಜ್ಯ

267 ಎಕರೆ ಅರಣ್ಯ ಬಳಕೆ: *ಕೇಂದ್ರ ಅರಣ್ಯ ಸಚಿವಾಲಯಕ್ಕೆ ವರದಿ

ಮಂಜುನಾಥ್ ಹೆಬ್ಬಾರ್‌
Published 22 ಡಿಸೆಂಬರ್ 2025, 23:30 IST
Last Updated 22 ಡಿಸೆಂಬರ್ 2025, 23:30 IST
   

ನವದೆಹಲಿ: ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ ಹಾಸನ ಜಿಲ್ಲೆಯಲ್ಲಿ 267 ಎಕರೆ (107 ಹೆಕ್ಟೇರ್) ಅರಣ್ಯದಲ್ಲಿ ನಿಯಮಬಾಹಿರವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬುದನ್ನು ಕರ್ನಾಟಕ ಸರ್ಕಾರ ಒಪ್ಪಿಕೊಂಡಿದೆ. 

ಯೋಜನೆಗೆ ನಿಯಮ ಉಲ್ಲಂಘಿಸಿ 0.04 ಹೆಕ್ಟೇರ್ ಅರಣ್ಯವನ್ನಷ್ಟೇ ಪಡೆಯಲಾಗಿದೆ ಎಂದು ವರ್ಷದಿಂದ ಹೇಳುತ್ತಿದ್ದ ರಾಜ್ಯ ಸರ್ಕಾರವು, ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಅವರು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ಉಪ ಮಹಾನಿರ್ದೇಶಕರಿಗೆ (ಅರಣ್ಯ) ಡಿಸೆಂಬರ್ 11ರಂದು 84 ಪುಟಗಳ ವರದಿ ಸಲ್ಲಿಸಿದ್ದಾರೆ. 

ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುರುತ್ವಾಕರ್ಷಣ ಕಾಲುವೆ ನಿರ್ಮಾಣಕ್ಕಾಗಿ 432 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡುವಂತೆ ಅರಣ್ಯ ಇಲಾಖೆಯು ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಹಾಸನ ಜಿಲ್ಲೆಯಲ್ಲಿ ಯೋಜನೆಯ ಕಾಮಗಾರಿಗಾಗಿ ಅಕ್ರಮವಾಗಿ ಅರಣ್ಯ ಬಳಸಿಕೊಳ್ಳಲಾಗಿದ್ದು, ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವಾಲಯ ನಿರ್ದೇಶನ ನೀಡಿತ್ತು. 432 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡಲು ಸಚಿವಾಲಯದ ಅರಣ್ಯ ಸಲಹಾ ಸಮಿತಿ ಎರಡು ಬಾರಿ ನಿರಾಕರಿಸಿತ್ತು. 

ADVERTISEMENT

‘ಯೋಜನೆಯ ಕಾಲುವೆ ನಿರ್ಮಾಣಕ್ಕೆ ಅಕ್ರಮವಾಗಿ 107 ಹೆಕ್ಟೇರ್ ಬಳಕೆ ಮಾಡಿರುವುದನ್ನು ಸಚಿವಾಲಯದ ಉನ್ನತ ಅಧಿಕಾರಿಗಳ ಸಮಿತಿ ಪತ್ತೆ ಹಚ್ಚಿ ವರದಿ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರವು 0.04 ಹೆಕ್ಟೇರ್‌ ಉಲ್ಲಂಘನೆ ‍ಪ್ರಕರಣದಲ್ಲಷ್ಟೇ ಎಫ್‌ಐಆರ್ ದಾಖಲಿಸಿದೆ. ಇದು ಗಂಭೀರ ಲೋಪ’ ಎಂದು ನವೆಂಬರ್‌ 6ರಂದು ಅಭಿಪ್ರಾಯಪಟ್ಟಿದ್ದ ಸಮಿತಿಯು, ಈ ಸಂಬಂಧ ಅರಣ್ಯ ಇಲಾಖೆ ಹಾಗೂ ಸಚಿವಾಲಯದ ಪ್ರಾದೇಶಿಕ ಕಚೇರಿಗೆ ಜಂಟಿ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು. 

‘ಅಸ್ಪಷ್ಟ ದಾಖಲೆಗಳಿಂದ ಲೋಪ’

‘ಹಾಸನ ವೃತ್ತದ ಸಿಸಿಎಫ್‌ ಹಾಗೂ ಡಿಸಿಎಫ್ ಅವರು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ನಿಯಮ ಉಲ್ಲಂಘಿಸಿ
ವಿಶ್ವೇಶ್ವರಯ್ಯ ಜಲ ನಿಗಮವು 107 ಹೆಕ್ಟೇರ್ ಅರಣ್ಯ ಬಳಸಿರುವ ಬಗ್ಗೆ
ಉಲ್ಲೇಖಿಸಿದ್ದಾರೆ. ಆದರೆ, ಈ ಲೋಪಕ್ಕೆ ವಿಶ್ವೇಶ್ವರಯ್ಯ ಜಲ ನಿಗಮ ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರಣರಲ್ಲ. ಅಸ್ಪಷ್ಟ ದಾಖಲೆಗಳ ಕಾರಣದಿಂದ ಈ ಲೋಪ ಘಟಿಸಿದೆ’ ಎಂದು ಪಿಸಿಸಿಫ್ ಅವರು ವರದಿಯಲ್ಲಿ ಸಮಜಾಯಿಷಿ ನೀಡಿದ್ದಾರೆ.

ಯಾದವ್‌ ಭೇಟಿಯಾಗಲಿರುವ ಡಿಕೆಶಿ 

ಎತ್ತಿನಹೊಳೆ, ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳ ಬಗ್ಗೆ ಚರ್ಚಿಸಲು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ. ಎತ್ತಿನಹೊಳೆ ಯೋಜನೆಗೆ 432 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡುವಂತೆ ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದರು. 

ಕಾವಲ್ ಸುತ್ತ ವಿವಾದ 

ಇಡಹಳ್ಳ ಕಾವಲ್‌ ಹಾಗೂ ಎತ್ತಿನಹೊಳೆ ಯೋಜನೆ ಕುರಿತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 2024ರ ಜೂನ್ 13ರಂದು ಸಭೆ ನಡೆದಿತ್ತು. ಇದು ಅರಣ್ಯ ಪ್ರದೇಶ ಎಂದು ಅರಣ್ಯ ಇಲಾಖೆ ವಾದಿಸಿತ್ತು. ಇದಕ್ಕೆ ಕಂದಾಯ ಇಲಾಖೆ ಸಹಮತ ಸೂಚಿಸಿರಲಿಲ್ಲ. ಜಂಟಿ ಸಮೀಕ್ಷೆ ನಡೆಸಿ ಗಡಿ ವಿವಾದ ಇತ್ಯರ್ಥಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕಂದಾಯ, ಭೂಮಾಪನ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಜಂಟಿ ಸಮೀಕ್ಷೆ ಆಗಸ್ಟ್‌ನಲ್ಲಿ ಆರಂಭವಾಗಿ 2025ರ ಜನವರಿಯಲ್ಲಿ ಮುಕ್ತಾಯಗೊಂಡಿತ್ತು.ಇಡಹಳ್ಳ ಕಾವಲ್‌ ಹಾಗೂ ಎತ್ತಿನಹೊಳೆ ಯೋಜನೆ ಕುರಿತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 2024ರ ಜೂನ್ 13ರಂದು ಸಭೆ ನಡೆದಿತ್ತು. ಇದು ಅರಣ್ಯ ಪ್ರದೇಶ ಎಂದು ಅರಣ್ಯ ಇಲಾಖೆ ವಾದಿಸಿತ್ತು. ಇದಕ್ಕೆ ಕಂದಾಯ ಇಲಾಖೆ ಸಹಮತ ಸೂಚಿಸಿರಲಿಲ್ಲ. ಜಂಟಿ ಸಮೀಕ್ಷೆ ನಡೆಸಿ ಗಡಿ ವಿವಾದ ಇತ್ಯರ್ಥಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕಂದಾಯ, ಭೂಮಾಪನ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಜಂಟಿ ಸಮೀಕ್ಷೆ ಆಗಸ್ಟ್‌ನಲ್ಲಿ ಆರಂಭವಾಗಿ 2025ರ ಜನವರಿಯಲ್ಲಿ ಮುಕ್ತಾಯಗೊಂಡಿತ್ತು.