ADVERTISEMENT

ಅಕ್ರಮ ಗಣಿಗಾರಿಕೆಯಲ್ಲಿ ಯಾರೆಲ್ಲಾ ಭಾಗಿ? ವಿಧಾನ ಪರಿಷತ್ತಿನಲ್ಲಿ ಹೀಗೊಂದು ಚರ್ಚೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 14:18 IST
Last Updated 22 ಆಗಸ್ಟ್ 2025, 14:18 IST
<div class="paragraphs"><p>ಕಾನೂನು,ಮಾನವ ಹಾಗೂ ಸಂಸದಿಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ</p></div>

ಕಾನೂನು,ಮಾನವ ಹಾಗೂ ಸಂಸದಿಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ‘ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಸಂಪತ್ತನ್ನು ಯಾರೆಲ್ಲಾ ಲೂಟಿ ಹೊಡೆದರು’ ಎಂಬುದರ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಸ್ವಾರಸ್ಯಕರವಾದ ಚರ್ಚೆ ನಡೆಯಿತು. 

ADVERTISEMENT

ಅಕ್ರಮ ಗಣಿಗಾರಿಕೆಯಿಂದ ತೆಗೆಯಲಾದ ಅದಿರು ಮತ್ತು ಅದರಿಂದ ಗಳಿಸಲಾದ ಲಾಭವನ್ನು ವಸೂಲಿ ಮಾಡಲು ಅವಕಾಶ ಮಾಡಿಕೊಡುವ ಮಸೂದೆ ಮೇಲಿನ ಚರ್ಚೆಯ ವೇಳೆ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರು ಪರಸ್ಪರ ಕಾಲೆಳೆದುಕೊಂಡರು.

ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಮಂಡಿಸಿದ ಮಸೂದೆಯ ಬಗ್ಗೆ ಬಿಜೆಪಿಯ ಕೇಶವ ಪ್ರಸಾದ್‌, ‘ಇಲ್ಲಿ ಕದ್ದವರು ಯಾರು, ಲಾಭ ಮಾಡಿಕೊಂಡವರು ಯಾರು ಎಂಬುದು ಜಗಜ್ಜಾಹೀರಾಗಿತ್ತು. ನಿಮ್ಮ ಸರ್ಕಾರ ರಚನೆಯಾಗಿ ಮೂರೇ ತಿಂಗಳಲ್ಲಿ ಇಂತಹ ಮಸೂದೆ ತರುತ್ತೀರಿ ಎಂದು ಎಣಿಸಿದ್ದೆ. ಆದರೆ ಇಷ್ಟೊಂದು ವಿಳಂಬ ಮಾಡಿಬಿಟ್ಟಿರಿ. ಮಸೂದೆ ರಚನೆಯಾಗುವುದನ್ನು ಯಾರಾದರೂ ತಡೆದರೇ’ ಎಂದು ಕೆಣಕಿದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್, ‘ಇಂಥದ್ದೊಂದು ಕ್ರಮ ಅತ್ಯಗತ್ಯವಾಗಿ ಬೇಕಾಗಿತ್ತು. ಬಳ್ಳಾರಿ ಅಕ್ರಮ ಗಣಿಗಾರಿಕೆಯಲ್ಲಿ ಯಾರೋ ಕೆಲವರ ಹೆಸರಷ್ಟೇ ಬಂದಿದೆ. ಹೆಸರು ಬಹಿರಂಗವಾಗದವರು ಬಹಳಷ್ಟು ಮಂದಿ ಇದ್ದಾರಲ್ಲವೇ’ ಎಂದು ಪ್ರಶ್ನಿಸಿದರು.

ಮುಂದುವರೆದು, ‘ಬಳ್ಳಾರಿಯ ಈ ಅಕ್ರಮದಿಂದ ರಾಜ್ಯದಲ್ಲಿ ಹಲವು ಬದಲಾವಣೆಗಳಾಗಿವೆ. ಒಳ್ಳೆಯ ಮತ್ತು ಕೆಟ್ಟ ಪರಿವರ್ತನೆಗಳೂ ಆಗಿವೆ. ಸರ್ಕಾರವೇ ಬದಲಾಗಿ ಹೋಗಿವೆ. ಇದರಲ್ಲಿ ಹಾಲಿ ಶಾಸಕರು, ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಿರಬಹದು. ಜತೆಗೆ ಮಾಜಿ ಶಾಸಕರು, ಸಚಿವರು ಮತ್ತು ನಿವೃತ್ತ ಅಧಿಕಾರಿಗಳು ಇರಬಹುದು. ಯಾರ ವಿರುದ್ಧವೆಲ್ಲಾ ಕ್ರಮ ತೆಗೆದುಕೊಳ್ಳುತ್ತೀರಿ’ ಎಂದು ಸಚಿವರನ್ನು ಪ್ರಶ್ನಿಸಿದರು.

‘ಅಕ್ರಮ ಗಣಿಗಾರಿಕೆ ವರದಿ ಬಂದ ಹತ್ತು ವರ್ಷಗಳ ಅವಧಿಯಲ್ಲಿ ಐದು ವರ್ಷ ನೀವು ಅಧಿಕಾರದಲ್ಲಿ ಇದ್ದೀರಿ, ಐದು ವರ್ಷ ನಾವು ಇದ್ದೆವು. ಇಬ್ಬರ ಅವಧಿಯಲ್ಲಿ ಯಾವ ಕ್ರಮವೂ ಆಗಿಲ್ಲ. ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ಧಾರೆ ಎಂಬುದನ್ನು ನೀವೇ ಹೇಳಿದ್ದರೆ ಚಂದ ಇತ್ತು. ನೀವು ಆತ್ಮಾವಲೋಕನ ಮಾಡಿಕೊಂಡಂತಾಗುತ್ತಿತ್ತು, ನಮ್ಮನ್ನು ಟೀಕಿಸಿದಂತೆಯೂ ಆಗುತ್ತಿತ್ತು’ ಎಂದು ಎಚ್‌.ಕೆ.ಪಾಟೀಲರು ತಿರುಗೇಟು ನೀಡಿದರು.

‘ಎಸ್ಐಟಿ 111 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಅವೆಲ್ಲವುಗಳ ಮೇಲೂ ವಸೂಲಾತಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪಾಟೀಲರು ಚರ್ಚೆಗೆ ತೆರೆ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.