ADVERTISEMENT

ಅಕ್ರಮ ಗಣಿಗಾರಿಕೆ: ತಕ್ಷಣ ಕ್ರಮಕ್ಕೆ ಮುಖ್ಯಮಂತ್ರಿಗೆ ಕಾಂಗ್ರೆಸ್‌ ನಿಯೋಗ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 15:32 IST
Last Updated 12 ಸೆಪ್ಟೆಂಬರ್ 2025, 15:32 IST
   

ಬೆಂಗಳೂರು: ₹1 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದಷ್ಟು ಕಬ್ಬಿಣದ ಅದಿರನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿ, ಸಾಗಿಸಿದ ರಾಜಕಾರಣಿಗಳು ಮತ್ತು ಕಂಪನಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ನಿಯೋಗವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕಾಂಗ್ರೆಸ್‌ ನಾಯಕರಾದ ವಿ.ಎಸ್‌.ಉಗ್ರಪ್ಪ, ಬಿ.ಎಲ್‌.ಶಂಕರ್, ಎಚ್.ಎಂ.ರೇವಣ್ಣ, ರಾಣಿ ಸತೀಶ್‌, ಜಯಪ್ರಕಾಶ್‌ ಹೆಗ್ಡೆ, ವಿ.ಆರ್‌.ಸುದರ್ಶನ್‌, ಎಲ್‌.ಹನುಮಂತಯ್ಯ ಅವರಿದ್ದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದೆ.

‘ಬಳ್ಳಾರಿ, ತುಮಕೂರು, ಚಿತ್ರದುರ್ಗ ಭಾಗದಲ್ಲಿ ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರು ಇರುವುದನ್ನು ಕಂಡುಕೊಂಡಿದ್ದ ಕೆಲವರು 2000ನೇ ಇಸವಿಯಿಂದಲೂ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ನ್ಯಾಯಮೂರ್ತಿ ಯು.ಎಲ್‌.ಭಟ್‌ ನೇತೃತ್ವದ ಆಯೋಗವು, ವಿ.ಎಸ್‌.ಉಗ್ರಪ್ಪ ಅಧ್ಯಕ್ಷತೆಯ ಸತ್ಯಶೋಧನಾ ಸಮಿತಿಯು ಈ ಅಕ್ರಮದ ಬಗ್ಗೆ ಗಮನ ಸೆಳೆದಿದ್ದವು. ಆದರೆ ಅಂದಿನ ಸರ್ಕಾರ ಅಕ್ರಮ ಗಣಿಗಾರಿಕೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ’ ಎಂದು ಪತ್ರದಲ್ಲಿ ವಿವರಿಸಿದೆ.

ADVERTISEMENT

‘ಹತ್ತಾರು ಸಾವಿರ ಕೋಟಿಯಷ್ಟು ಅದಿರನ್ನು ಕದ್ದು ಸಾಗಿಸಿರುವುದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ ಅವರ ನೇತ್ರತ್ವದಲ್ಲಿ ನಡೆದ ತನಿಖೆಯಲ್ಲಿ ಪತ್ತೆಯಾಗಿತ್ತು. ಎಚ್‌.ಕೆ.ಪಾಟೀಲ ಅವರ ನೇತೃತ್ವದಲ್ಲಿ ರಚಿಸಲಾದ ಸಂಪುಟ ಉಪ ಸಮಿತಿಯು ಈಚೆಗೆ ವರದಿ ನೀಡಿದ್ದು, ₹1 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂಬುದನ್ನು ಪತ್ತೆ ಮಾಡಿದೆ’ ಎಂದಿದೆ.

‘ಇಷ್ಟು ದೊಡ್ಡ ಮಟ್ಟದಲ್ಲಿ ರಾಜ್ಯದ ಸಂಪತ್ತನ್ನು ಲೂಟಿ ಹೊಡೆದವರು ಆರಾಮವಾಗಿ ಇದ್ದಾರೆ. ಅವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಂಡು, ರಾಜ್ಯಕ್ಕಾಗಿರುವ ನಷ್ಟವನ್ನು ವಸೂಲಿ ಮಾಡಬೇಕು’ ಎಂದು ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.