ADVERTISEMENT

ಹಂಪಿಯಲ್ಲಿ ಅಕ್ರಮ ತೆಪ್ಪ ಸಂಚಾರ: ಪ್ರವಾಸಿಗರಿಂದ ಮನಬಂದಂತೆ ಹಣ ವಸೂಲಿ

ಯಾಂತ್ರೀಕೃತ ದೋಣಿಗೆ ಅನುಮತಿ ಪಡೆದು ತೆಪ್ಪ ಓಡಿಸುತ್ತಿದ್ದರೂ ಕ್ರಮವಿಲ್ಲ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಆಗಸ್ಟ್ 2019, 19:30 IST
Last Updated 26 ಆಗಸ್ಟ್ 2019, 19:30 IST
ಅಕ್ರಮವಾಗಿ ಹಂಪಿಯ ಚಕ್ರತೀರ್ಥದಿಂದ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರನ್ನು ತೆಪ್ಪದಲ್ಲಿ ಕೊಂಡೊಯ್ಯುತ್ತಿರುವುದು
ಅಕ್ರಮವಾಗಿ ಹಂಪಿಯ ಚಕ್ರತೀರ್ಥದಿಂದ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರನ್ನು ತೆಪ್ಪದಲ್ಲಿ ಕೊಂಡೊಯ್ಯುತ್ತಿರುವುದು    

ಹೊಸಪೇಟೆ: ತಾಲ್ಲೂಕಿನ ಹಂಪಿ ಸುತ್ತಮುತ್ತಲಿನ ಪರಿಸರದ ತುಂಗಭದ್ರಾ ನದಿಯಲ್ಲಿ ಯಾಂತ್ರೀಕೃತ ದೋಣಿಗಳನ್ನು ಓಡಿಸಲಷ್ಟೇ ಗ್ರಾಮ ಪಂಚಾಯಿತಿ ಅನುಮತಿ ನೀಡಿದೆ. ಆದರೆ, ಅದನ್ನು ಮರೆಮಾಚಿ ಅಕ್ರಮವಾಗಿ ತೆಪ್ಪಗಳನ್ನು ಓಡಿಸಲಾಗುತ್ತಿದೆ.

ಟೆಂಡರ್‌ ಕೊಡುವಾಗ ಷರತ್ತು ವಿಧಿಸಿಯೇ ಅನುಮತಿ ನೀಡಲಾಗಿದೆ. ಆದರೆ, ಆ ಷರತ್ತನ್ನು ರಾಜಾರೋಷವಾಗಿ ಉಲ್ಲಂಘಿಸಿ ಮನಬಂದಂತೆ ವರ್ತಿಸುತ್ತಿದ್ದಾರೆ. ಅಷ್ಟೇ ಅಲ್ಲ, ತೆಪ್ಪದಲ್ಲಿ ಸುತ್ತಾಡಲು ಪರ ರಾಜ್ಯ, ಪರದೇಶಗಳಿಂದ ಬರುವ ಪ್ರವಾಸಿಗರಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪ್ರವಾಸಿಗರ ಸೋಗಿನಲ್ಲಿ‘ಪ್ರಜಾವಾಣಿ’ ಪ್ರತಿನಿಧಿ ಹಂಪಿಯ ಚಕ್ರತೀರ್ಥಕ್ಕೆ ಹೋಗಿ ಅಲ್ಲಿದ್ದ ತೆಪ್ಪದವರಿಗೆ ತೆಪ್ಪದಲ್ಲಿ ಸುತ್ತಾಡಿಸುವ ಕುರಿತು ಕೇಳಿದಾಗ, ‘ಇಲ್ಲಿಂದ ಅರ್ಧ ಗಂಟೆ ಒಬ್ಬರನ್ನು ತೆಪ್ಪದಲ್ಲಿ ಕರೆದುಕೊಂಡು ಹೋಗಿ, ತಂದು ಬಿಡಲು ₹350 ತೆಗೆದುಕೊಳ್ಳುತ್ತೇವೆ. ಆ ಸಮಯದಲ್ಲಿ ಸಾಧ್ಯವಾದಷ್ಟು ಸ್ಥಳಗಳನ್ನು ತೋರಿಸುತ್ತೇವೆ’ ಎಂದು ಹೆಸರು ಹೇಳಲಿಚ್ಛಿಸದ ತೆಪ್ಪದ ಮಾಲೀಕ ತಿಳಿಸಿದರು.

ADVERTISEMENT

ತೆಪ್ಪದಲ್ಲಿ ಸುತ್ತಾಡಿಸಲು ಇಷ್ಟೊಂದು ಶುಲ್ಕವೇ? ಅದಕ್ಕೆ ರಸೀದಿ ಏನಾದರೂ ಕೊಡುವಿರಾ ಎಂದು ಪ್ರಶ್ನಿಸಿದಾಗ, ‘ಹನ್ನೊಂದು ಲಕ್ಷಕ್ಕೆ ಟೆಂಡರ್‌ ಪಡೆದುಕೊಂಡಿದ್ದೇವೆ. ಮೊದಲಿನಿಂದಲೂ ₹350 ಪಡೆಯುತ್ತಿದ್ದೇವೆ. ಅದಕ್ಕೆ ಯಾವುದೇ ರಸೀದಿ ಕೊಡುವುದಿಲ್ಲ’ ಎಂದು ಹೇಳಿದರು.

‘ಪ್ರಜಾವಾಣಿ’ ಪ್ರತಿನಿಧಿ ಎಂದು ಪರಿಚಯ ಮಾಡಿಕೊಂಡು ಇನ್ನೊಬ್ಬ ತೆಪ್ಪದ ಮಾಲೀಕ ಪೀರು ನಾಯ್ಕ ಎಂಬುವರನ್ನು ಪ್ರಶ್ನಿಸಿದಾಗ, ‘ಅರ್ಧ ಗಂಟೆ ತೆಪ್ಪದಲ್ಲಿ ಸುತ್ತಾಡಿಸಲು ಒಬ್ಬರಿಗೆ ₹100 ಪಡೆಯುತ್ತೇವೆ. ಸೂರ್ಯ ದೇವಸ್ಥಾನ, ಲಕ್ಷ್ಮಿ ದೇವಸ್ಥಾನ ಹಾಗೂ ಅದರ ಸುತ್ತಮುತ್ತಲಿನ ಸ್ಥಳಗಳನ್ನು ತೋರಿಸಿಕೊಂಡು ಬರುತ್ತೇವೆ. ಒಟ್ಟು ನಾಲ್ಕು ತೆಪ್ಪಗಳನ್ನು ಓಡಿಸಲು ₹2.72 ಲಕ್ಷಕ್ಕೆ ಟೆಂಡರ್‌ ಪಡೆದುಕೊಂಡಿದ್ದೇವೆ. ನೀರು ಕಡಿಮೆ ಇರುವುದರಿಂದ ಯಾಂತ್ರೀಕೃತ ದೋಣಿಗಳ ಬದಲಾಗಿ ಸದ್ಯ ತೆಪ್ಪ ಓಡಿಸುತ್ತಿದ್ದೇವೆ’ ಎಂದು ಅವರ ಕ್ರಮ ಸಮರ್ಥಿಸಿಕೊಂಡರು.

ಈ ಕುರಿತು ಬುಕ್ಕಸಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲಗೌಡ ಅವರನ್ನು ಸಂಪರ್ಕಿಸಿದಾಗ, ‘ಸುರಕ್ಷತೆಯ ದೃಷ್ಟಿಯಿಂದ ತುಂಗಭದ್ರಾ ನದಿಯಲ್ಲಿ ಯಾಂತ್ರೀಕೃತ ದೋಣಿಗಳನ್ನು ಓಡಿಸಲು ಅನುಮತಿ ಕೊಡಲಾಗಿದೆ. ಪ್ರವಾಸಿಗರನ್ನು ಅದರಲ್ಲಿಯೇ ತೋರಿಸಿಕೊಂಡು ಬರಬೇಕು. ಕಡ್ಡಾಯವಾಗಿ ಲೈಫ್‌ ಜಾಕೆಟ್‌ ಹಾಕಿಕೊಂಡು ಕರೆದೊಯ್ಯಬೇಕು. ಬೇಕಾಬಿಟ್ಟಿ ಶುಲ್ಕ ವಿಧಿಸುವಂತಿಲ್ಲ. ಟೆಂಡರ್‌ನಲ್ಲಿ ತಿಳಿಸಿರುವಂತೆ ಶುಲ್ಕ ಪಡೆದು, ರಸೀದಿ ಕೊಡಬೇಕು’ ಎಂದರು.

‘ಯಾಂತ್ರೀಕೃತ ದೋಣಿಗಳ ಬದಲಾಗಿ ತೆಪ್ಪಗಳನ್ನು ಓಡಿಸುತ್ತಿದ್ದರೆ ಅದು ಕಾನೂನುಬಾಹಿರ. ಯಾರು ಕೂಡ ಆ ರೀತಿ ಮಾಡುವಂತಿಲ್ಲ. ಪರಿಶೀಲನೆ ನಡೆಸಿ, ಒಂದುವೇಳೆಯಾರಾದರೂ ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಂಡು, ಅವರ ಟೆಂಡರ್‌ ರದ್ದುಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಹಂಪಿಗೆ ನಿತ್ಯ ದೇಶ–ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಾರೆ. ಇಲ್ಲಿನ ಹೋಟೆಲ್‌, ದೋಣಿಯವರು ಮನಬಂದಂತೆ ಹಣ ವಸೂಲಿ ಮಾಡುತ್ತಾರೆ. ಯಾರಿಗೂ ರಸೀದಿ ಕೊಡುವುದಿಲ್ಲ. ಪ್ರವಾಸಿಗರ ಮುಖ ನೋಡಿ ಹಣ ಪಡೆಯುತ್ತಾರೆ. ಇದರಿಂದ ಹಂಪಿಗೆ ಕೆಟ್ಟ ಹೆಸರು ಬರುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು. ಹೋಟೆಲ್‌ನವರು ಊಟಕ್ಕೆ ಮನಬಂದಂತೆ ಹಣ ತೆಗೆದುಕೊಳ್ಳುತ್ತಿರುವ ವಿಷಯವನ್ನು ಇತ್ತೀಚೆಗೆ ‘ಪ್ರಜಾವಾಣಿ’ ಸುದ್ದಿ ಪ್ರಕಟಿಸಿದ ನಂತರ ಅದಕ್ಕೆ ತಡೆ ಬಿದ್ದಿದೆ. ತೆಪ್ಪ ಸವಾರಿಗೂ ತಡೆಯೊಡ್ಡಿ, ನಿರ್ದಿಷ್ಟ ದರ ನಿಗದಿಗೊಳಿಸಬೇಕು’ ಎಂದು ಹಂಪಿ ನಿವಾಸಿ ರಮೇಶ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.