ADVERTISEMENT

ಐಎಂಎ: ₹2,695 ಕೋಟಿಗೆ ಹಕ್ಕು ಸಲ್ಲಿಕೆ

ಹೈಕೋರ್ಟ್‌ಗೆ ಸಕ್ಷಮ ಪ್ರಾಧಿಕಾರದ ಅಫಿಡವಿಟ್ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 19:09 IST
Last Updated 10 ಫೆಬ್ರುವರಿ 2021, 19:09 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಪ್ರಕರಣದಲ್ಲಿ ಠೇವಣಿದಾರರ 69,099 ಖಾತೆಗಳಿದ್ದು, ಈ ಪೈಕಿ ಹೂಡಿಕೆ ವಾಪಸ್ ಕೋರಿ 65,258 ಅರ್ಜಿಗಳು ಬಂದಿವೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ(ಕೆಪಿಐಡಿ) ಕಾಯ್ದೆ 2004ರ ಅಡಿಯಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಐಎಎಸ್ ಅಧಿಕಾರಿ ಹರ್ಷ ಗುಪ್ತ ವಿವರಣೆ ಸಲ್ಲಿಸಿದ್ದು, ‘2021ರ ಜನವರಿ 3ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು ₹2,695 ಕೋಟಿ ವಾಪಸ್ ಕೋರಿ ಅರ್ಜಿಗಳು ಬಂದಿವೆ’ ಎಂದು ವಿವರಿಸಿದ್ದಾರೆ.

‘ಬಂದಿರುವ ಅರ್ಜಿಗಳಲ್ಲಿ 45 ಸಾವಿರ ಅರ್ಜಿಗಳ ಪರಿಶೀಲನೆ ಮುಗಿದಿದೆ. ಉಳಿದ ಅರ್ಜಿಗಳ ಪರಿಶೀಲನೆ ಕಾರ್ಯ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹಕ್ಕುಗಳ ಇತ್ಯರ್ಥದ ವಿಧಾನ ಅಂತಿಮಗೊಳಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿಸಲಾಗಿದೆ’ ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

‘ಐಎಂಎ ಗ್ರೂಪ್ ಪಾವತಿಸಿದ ₹134 ಕೋಟಿ ಆದಾಯ ತೆರಿಗೆಯನ್ನು ಮರುಪಾವತಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್-ಕಂದಾಯ) ಅವರು ಆದಾಯ ತೆರಿಗೆ(ಐ.ಟಿ) ಪ್ರಧಾನ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಆದಾಯ ತೆರಿಗೆ ಇಲಾಖೆಗೆ ಬರೆದಿರುವ ಪತ್ರವನ್ನು ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಈ ಹಗರಣದ ತನಿಖೆಯ ಪ್ರಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.