ADVERTISEMENT

ಜಲಾಶಯಗಳಲ್ಲಿ ಹೆಚ್ಚಿದ ಒಳಹರಿವು

ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 20:53 IST
Last Updated 19 ಜೂನ್ 2021, 20:53 IST
ಧಾರವಾಡ ತಾಲ್ಲೂಕಿನ ಹಿರೇಕೆರೆ ಭರ್ತಿಯಾಗಿದ್ದು, ಕೋಡಿ ಹರಿಯಿತು
ಧಾರವಾಡ ತಾಲ್ಲೂಕಿನ ಹಿರೇಕೆರೆ ಭರ್ತಿಯಾಗಿದ್ದು, ಕೋಡಿ ಹರಿಯಿತು   

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕೆಲವೆಡೆ ನದಿಗಳು ಅಪಾಯದ ಮಟ್ಟ ತಲುಪಿವೆ. ತುಂಗಭದ್ರಾ, ಭದ್ರಾ, ಕಬಿನಿ, ಆಲಮಟ್ಟಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.

ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದಿದ್ದು, ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.15 ಲಕ್ಷ ಕ್ಯುಸೆಕ್ ನೀರು ಶನಿವಾರ ಹರಿದು ಬಂದಿದೆ. ಘಟಪ್ರಭಾ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ 10 ಅಡಿ ಹೆಚ್ಚಾಗಿದೆ.

ನಿಪ್ಪಾಣಿ ತಾಲ್ಲೂಕಿನ ಸಿದ್ನಾಳ ಹತ್ತಿರ ವೇದಗಂಗಾ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಎನ್‌ಡಿಆರ್‌ಎಫ್‌ ತಂಡ ರಕ್ಷಿಸಿದೆ. ಸವದತ್ತಿ ತಾಲ್ಲೂಕಿನ ಯಕ್ಕುಂಡಿಯಲ್ಲಿ ಮೀನುಗಾರಿಕೆಗೆ ಹೋಗಿದ್ದಾಗ ತೆಪ್ಪ ಮಗುಚಿ ಶುಕ್ರವಾರ ನಾಪತ್ತೆಯಾಗಿದ್ದ ಕುಸುಮಾನಾ ಅತ್ತಾರ (52) ಎನ್ನುವವರ ಮೃತ ದೇಹ ಶನಿವಾರ ಪತ್ತೆಯಾಯಿತು. ಬೆಳಗಾವಿ ತಾಲ್ಲೂಕಿನ ಕಾಕತಿ ಬಳಿ ಮಾರ್ಕಂಡೇಯ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ADVERTISEMENT

ಕೃಷ್ಣಾ ಮತ್ತು ಉಪ ನದಿಗಳ ಹರಿವಿ‌ನಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ದೂಧ್‌ಗಂಗಾ ನದಿಯಿಂದ 27,280 ಕ್ಯುಸೆಕ್ ಮತ್ತು ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 88,500 ಕ್ಯುಸೆಕ್ ಸೇರಿದಂತೆ ಒಟ್ಟು 1,15,780 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣೆಗೆ ಸೇರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.