ADVERTISEMENT

ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಕೊಡುಗೆ ಹೆಚ್ಚಿಸಿ: ಇನ್ಫೋಸಿಸ್ ನಾರಾಯಣಮೂರ್ತಿ

ಐಐಎಸ್ಸಿ ವಿಜ್ಞಾನಿ ಸೇರಿದಂತೆ ಆರು ಮಂದಿಗೆ ಇನ್ಫೊಸಿಸ್ ಪ್ರಶಸ್ತಿ ಪ್ರಕಟ: ಪ್ರಶಸ್ತಿ ಮೊತ್ತ ತಲಾ ₹70 ಲಕ್ಷ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 11:11 IST
Last Updated 7 ನವೆಂಬರ್ 2019, 11:11 IST
   

ಬೆಂಗಳೂರು: ಆಧುನಿಕ ಸಂವಹನ, ಕಂಪ್ಯೂಟರ್ ಬಳಕೆ ಸಹಿತ ಹೆಚ್ಚಿನ ಸಂಶೋಧನೆಗಳು ಭಾರತದ ಬದಲಿಗೆ ಇತರ ದೇಶಗಳಿಂದ ಆಗಿವೆ. ದೇಶ ಎದುರಿಸುತ್ತಿರುವ ಚಿಕೂನ್ ಗುನ್ಯಾ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆಹಲವು ಕ್ಷೇತ್ರಗಳಲ್ಲಿ ಭಾರತ ಇನ್ನಾದರೂ ಮಹತ್ತರ ಕೊಡುಗೆ ನೀಡಬೇಕು ಎಂದು ಇನ್ಫೊಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಎನ್ ಆರ್ ನಾರಾಯಣಮೂರ್ತಿ ಹೇಳಿದರು.

ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಇನ್ಫೋಸಿಸ್ ಸಂಸ್ಥೆಯ ಆವರಣದಲ್ಲಿ ಗುರುವಾರ ಇನ್ಫೊಸಿಸ್ ವಿಜ್ಞಾನ ಪ್ರತಿಷ್ಠಾನದಿಂದ 11ನೇ ವಾರ್ಷಿಕಪ್ರಶಸ್ತಿ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಕ್ರಿ.ಶ 100 ಮತ್ತು ಕ್ರಿ. ಶ. 1400 ನಡುವಿನ ಭಾರತದ ವೈಜ್ಞಾನಿಕ ಸಾಧನೆಗಳು ಮರುಕಳಿಸಬೇಕಾಗಿದೆ ಎಂದರು.

ನಾವು ಅದೆಷ್ಟೋ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಇವುಗಳಿಗೆ ಪರಿಹಾರ ಹುಡುಕಿದರೆ ನಮ್ಮಿಂದ ಇಡೀ ಜಗತ್ತಿಗೇ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ ಎಂದರು.

ADVERTISEMENT

ಸಂಸ್ಥೆಯ ಇನ್ನೊಬ್ಬ ನಿರ್ದೇಶಕ ಕ್ರಿಸ್ ಗೋಪಾಲಕೃಷ್ಣ ಮಾತನಾಡಿ, ಸಂಶೋಧನೆ ಮತ್ತು ಅಭಿವೃದ್ಧಿ ಗೆ ಜಿಡಿಪಿಯಲ್ಲಿ ನೀಡುವ ಮೊತ್ತದ ಪ್ರಮಾಣ ಹೆಚ್ಚಲೇಬೇಕಿದೆ ಎಂದರು.ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ನಡುವೆ ಅಗಾಧ ಅಂತರ ಇದ್ದು, ಅದನ್ನು ಭರ್ತಿ ಮಾಡುವ ಕೆಲಸ ಆಗಬೇಕು ಎಂದರು.

ಪ್ರಶಸ್ತಿಗೆ ಆಯ್ಕೆ: ಇನ್ಫೊಸಿಸ್ ಸಮಾಜ ವಿಜ್ಞಾನ ಪ್ರಶಸ್ತಿಗೆ ಅಮೆರಿಕದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಆನಂದ ಪಾಂಡ್ಯನ್,ಮಾನವೀಯ ವಿಭಾಗದ ಪ್ರಶಸ್ತಿಗೆ ಐಐಟಿಯ ಮನು ವಿ.ದೇವದೇವನ್, ಜೀವ ವಿಜ್ಞಾನ ಪ್ರಶಸ್ತಿಗೆ ಹೈದರಾಬಾದ್‌‌ನ ಸೆಂಟರ್ ಫಾರ್ ಸೆಲ್ಯುಲಾರ್ ಬಯೊಲಜಿಯ ಮಂಜುಳಾ ರೆಡ್ಡಿ, ಭೌತಿಕ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾದ ಬೆಂಗಳೂರು ಐಐಎಸ್ಸಿಯ ಇನ್ ಆರ್ಗಾನಿಕ್ ಅಂಡ್ ಪಿಸಿಕಲ್ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಜಿ. ಮುಗೇಶ್, ಗಣಿತ ಪ್ರಶಸ್ತಿಗೆ ಜೂರಿಚ್ ಇಟಿಎಚ್‌ನ ಸಿದ್ದಾರ್ಥ ಮಿಶ್ರ, ಎಂಜಿನಿಯರಿಂಗ್ ಅಂಡ್ ಕಂಪ್ಯೂಟರ್ ಸೈನ್ಸ್ ಪ್ರಶಸ್ತಿಗೆ ಐಐಟಿ ಬಾಂಬೆಯ ಸುನೀತಾ ಸರವಗಿ ಆಯ್ಕೆಯಾಗಿದ್ದಾರೆ.

ಪ್ರತಿ ಪ್ರಶಸ್ತಿ 1 ಲಕ್ಷ ಡಾಲರ್ (ಸುಮಾರು ₹ 70 ಲಕ್ಷ) ನಗದು ಒಳಗೊಂಡಿದೆ. 2020ರ ಜನವರಿ 7ರಂದು ಬೆಂಗಳೂರಿನಲ್ಲಿ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.