ಬೆಂಗಳೂರು: ‘₹30 ಲಕ್ಷ ಹೆಚ್ಚಿನ ಮೌಲ್ಯದ ಆಸ್ತಿಗಳ ನೋಂದಣಿ ಪ್ರಕರಣಗಳಲ್ಲಿ ಖರೀದಿದಾರರು ಮತ್ತು ಮಾರಾಟಗಾರರ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಕಡ್ಡಾಯವಾಗಿದ್ದರೂ, ರಾಜ್ಯದ 33 ಉಪ ನೋಂದಣಾಧಿಕಾರಿಗಳು ವರದಿ ಸಲ್ಲಿಸುತ್ತಿಲ್ಲ. ತೆರಿಗೆ ತಪ್ಪಿಸಲು ಇದು ದಾರಿಮಾಡಿಕೊಡುತ್ತಿದೆ’ ಎಂದು ಆದಾಯ ತೆರಿಗೆ ಇಲಾಖೆಯು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದೆ.
ತೆರಿಗೆ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಆದಾಯ ತೆರಿಗೆ ಪಾವತಿದಾರರ, ತೆರಿಗೆ ವಿವರಗಳನ್ನು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆಯು ಈ ಕ್ರಮವನ್ನು ಜಾರಿಗೆ ತಂದಿತ್ತು. ಈ ಪ್ರಕಾರ ಪ್ರತಿ ಉಪ ನೋಂದಣಾಧಿಕಾರಿಗಳೂ ತಮ್ಮ ವ್ಯಾಪ್ತಿಯಲ್ಲಿ ನೋಂದಣಿಯಾಗುವ ಆಸ್ತಿಗಳ ಮೌಲ್ಯ ₹30 ಲಕ್ಷ ದಾಟಿದರೆ, ಅದರ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಿತ್ತು.
ರಾಜ್ಯದ ಕೆಲ ಉಪ ನೋಂದಣಾಧಿಕಾರಿಗಳು ಈ ವಿವರ ಸಲ್ಲಿಸದೇ ಇರುವ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದಾಯ ತೆರಿಗೆ ಇಲಾಖೆ ಈ ಹಿಂದೆಯೂ ಪತ್ರ ಬರೆದಿತ್ತು. ಈಗ ಮತ್ತೆ ಪತ್ರ ಬರೆದಿರುವ ಇಲಾಖೆ, ಉಪ ನೋಂದಣಾಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘ಕಾವೇರಿ ತಂತ್ರಾಂಶದಲ್ಲಿ ಎಲ್ಲ ವಿವರಗಳೂ ಸಿದ್ಧವಾಗಿ ಲಭ್ಯವಿರುತ್ತದೆ. ಆ ವಿವರವನ್ನು ಸಲ್ಲಿಸಲು ಉಪ ನೋಂದಣಾಧಿಕಾರಿಗಳಿಗೆ ಎದುರಾಗುತ್ತಿರುವ ಸಮಸ್ಯೆ ಏನು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಿ’ ಎಂದು ಪತ್ರದಲ್ಲಿ ಕೋರಿದೆ.
ಬೆಂಗಳೂರು ನಗರ ವ್ಯಾಪ್ತಿಯ ರಾಜಾಜಿನಗರ, ಬ್ಯಾಟರಾಯನಪುರ, ಬಸವನಗುಡಿ, ಗಾಂಧಿನಗರ, ಯಲಹಂಕ, ಜೆ.ಪಿ.ನಗರ, ಮಹದೇವಪುರ, ಹೆಬ್ಬಾಳ, ಬನಶಂಕರಿ, ನಾಗರಬಾವಿ ಉಪ ನೋಂದಣಾಧಿಕಾರಿಗಳನ್ನು ಇಲಾಖೆಯು ಪತ್ರದಲ್ಲಿ ಉಲ್ಲೇಖಿಸಿದೆ. ಜತೆಗೆ ಇತರ ಜಿಲ್ಲೆಗಳ ಗುಬ್ಬಿ, ಪಾವಗಡ, ಮಧುಗಿರಿ, ಸೋಮವಾರಪೇಟೆ, ನೆಲಮಂಗಲ, ಚಿಕ್ಕನಾಯಕನಹಳ್ಳಿ, ಚಿಂತಾಮಣಿ, ಮಾಲೂರು, ದೊಡ್ಡಬಳ್ಳಾಪುರ, ಮೈಸೂರು ದಕ್ಷಿಣ, ಮೈಸೂರು ಪೂರ್ವ, ಮುಳುಬಾಗಿಲು, ಬಂಗಾರಪೇಟೆ, ಕುಶಾಲನಗರ, ತರೀಕೆರೆ, ಅತ್ತಿಬೆಲೆ ಉಪ ನೋಂದಣಾಧಿಕಾರಿಗಳು ಈ ವರದಿ ಸಲ್ಲಿಸಿಲ್ಲ ಎಂದು ಪತ್ರದಲ್ಲಿ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.