ಬೆಂಗಳೂರು: ‘ವಸತಿ ಇಲಾಖೆಯ ವಿವಿಧ ಮನೆ ಹಂಚಿಕೆ ಯೋಜನೆಗಳಲ್ಲಿ ಮುಸ್ಲಿಮರಿಗೆ ಶೇ 15ರಷ್ಟು ಹಂಚಿಕೆ ಮಾಡುವ ಸರ್ಕಾರದ ನಿರ್ಧಾರದಿಂದ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗದವರ ಮೀಸಲಾತಿಗೆ ಧಕ್ಕೆಯಾಗಲಿದೆ. ಇದು ಖಂಡನೀಯ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಧರ್ಮದ ಆಧಾರದಲ್ಲಿ ಯಾವುದೇ ರೀತಿಯ ಮೀಸಲಾತಿ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ಕಾರದ ಈ ನಡೆ ನ್ಯಾಯಾಂಗ ನಿಂದನೆ ಮಾತ್ರವಲ್ಲ, ಸಂವಿಧಾನ ವಿರೋಧಿಯೂ ಹೌದು’ ಎಂದರು.
‘ಸಿದ್ದರಾಮಯ್ಯ ಅವರು ಈ ಹಿಂದೆ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸಿದ್ದರು. ಈಗ ವಸತಿ ಯೋಜನೆಯಲ್ಲೂ ಮುಸ್ಲಿಮರಿಗೆ ಮಣೆ ಹಾಕಲು ಹೊರಟಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದರು.
ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಬಹಮನಿ ಸುಲ್ತಾನರ ಕಾಲದ ಆಳ್ವಿಕೆಯನ್ನು ಮರು ಸ್ಥಾಪಿಸಲು ಹೊರಟಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಧರ್ಮದ ಹೆಸರಿನಲ್ಲಿ ಮುಸ್ಲಿಮರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಕಲ್ಪಿಸಿ ನಂತರ ಸರ್ಕಾರಿ ಗುತ್ತಿಗೆ ಕಾಮಗಾರಿಗಳ ಹಂಚಿಕೆಯಲ್ಲಿಯೂ ಮೀಸಲಾತಿ ನಿಗದಿಪಡಿಸಿತ್ತು. ಈಗ ವಸತಿ ಸೌಲಭ್ಯ ಕಲ್ಪಿಸುವುದರಲ್ಲಿಯೂ ಮೀಸಲಾತಿ ಹೆಚ್ಚಿಸಿದೆ. ಪ್ರಜಾಪ್ರಭುತ್ವದ ತತ್ವ-ಸರ್ವರಿಗೂ ಸಮಾನತೆ, ಸಂವಿಧಾನದ ಆಶಯ-ವರ್ಗ ತಾರತಮ್ಯಕ್ಕೆ ಅವಕಾಶ ನೀಡದಿರುವುದು, ಇವೆರಡನ್ನೂ ಗಾಳಿಗೆ ತೂರಿರುವ ಕಾಂಗ್ರೆಸ್ ಸರ್ಕಾರವು, ಮುಸ್ಲಿಂ ಸಮುದಾಯವನ್ನು ಓಲೈಸಲು ಟೊಂಕ ಕಟ್ಟಿ ನಿಂತಿದೆ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಧರ್ಮಾಧಾರಿತ ಮೀಸಲಾತಿಗೆ ಅವಕಾಶವೇ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರವು ಓಲೈಕೆ ಮತ್ತು ಮತ ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿದೆ. ಇದು ಒಂದು ಅಪಾಯಕಾರಿ ನಡೆಯಾಗಿದೆ. ವಸತಿ ಯೋಜನೆಗಳಲ್ಲೂ ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ಸಮಾಜವನ್ನು ಒಡೆಯಲು ಕಾಂಗ್ರೆಸ್ ಮುಂದಾಗಿದೆ. ಅಲ್ಪಕಾಲಿಕ ರಾಜಕೀಯ ಲಾಭಕ್ಕಾಗಿ ಕರ್ನಾಟಕದ ಸಾಮಾಜಿಕ ಸಾಮರಸ್ಯವನ್ನೇ ಬಲಿಗೊಡುತ್ತಿದೆ.
ಅಮಿತ್ ಮಾಳವೀಯ, ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.