ಬೆಂಗಳೂರು: ಇಲ್ಲಿನ ಕಬ್ಬನ್ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಕವಾಯತು ಮೈದಾನದಲ್ಲಿ ಆಗಸ್ಟ್ 15ರಂದು (ಶುಕ್ರವಾರ) ರಾಜ್ಯಮಟ್ಟದ 79ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು ಬೆಂಗಳೂರು ನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ನಗರ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯುವ ವಿಶೇಷ ಕವಾಯತು ವೀಕ್ಷಣೆ ಮಾಡಲಿದ್ದಾರೆ. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮೆರುಗು ನೀಡಲಿವೆ.
ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಬುಧವಾರ ಮೈದಾನದಲ್ಲಿ ಸಿದ್ಧತೆ ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆಗೆ ಸೂಕ್ತ ಬಂದೋಬಸ್ಥ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಮೈದಾನದ ಸುತ್ತಮುತ್ತ ಎಲ್ಲ ಘಟನೆಗಳನ್ನೂ ಸೂಕ್ಷ್ಮವಾಗಿ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾ, ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಲಾಗಿದೆ ಎಂದು ಹೇಳಿದರು.
ಪಾಸ್ ವಿತರಣೆ: ಆಹ್ವಾನಿತರಿಗೆ ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ. ಅವರು ಪಾಸ್‌ಗಳನ್ನು ಗೇಟ್ ಬಳಿಯ ಸಿಬ್ಬಂದಿಗೆ ತೋರಿಸಿ ಪ್ರವೇಶಿಸಬೇಕು. ಡಾರ್ಕ್ ಪಿಂಕ್ ಬಣ್ಣದ ವಿವಿಐಪಿ ಪಾಸ್ ಹೊಂದಿರುವವರು ಗೇಟ್ ಸಂಖ್ಯೆ 2ರಲ್ಲಿ (ಬ್ಲಾಕ್ 1) (ಕ್ರಮ ಸಂಖ್ಯೆ 1ರಿಂದ 500ರ ವರೆಗೆ) ಪ್ರವೇಶಿಸಬೇಕು.
ಲೈಟ್ ಪಿಂಕ್ ಬಣ್ಣದ ಪಾಸ್ ಹೊಂದಿರುವ ಗಣ್ಯರು, ಅಧಿಕಾರಿಗಳು (ಕ್ರಮ ಸಂಖ್ಯೆ 501ರಿಂದ 2,500 ವರೆಗೆ) ಗೇಟ್ 2ರಲ್ಲೇ ಪ್ರವೇಶಿಸಿ ಬ್ಲಾಕ್ 2 ಹಾಗೂ 3ರಲ್ಲಿ ಆಸೀನರಾಗಬೇಕು. ಬಿಳಿ ಬಣ್ಣದ ಪಾಸ್ ಹೊಂದಿರುವವರು ಗೇಟ್ ಸಂಖ್ಯೆ 4ರಲ್ಲಿ, ಗೇಟ್ ಸಂಖ್ಯೆ 5ರಲ್ಲಿ ಹಸಿರು ಬಣ್ಣದ ಪಾಸ್ ಹೊಂದಿರುವ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ನಡೆಸಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈದಾನವನ್ನು ಸಿದ್ಧಗೊಳಿಸಲಾಗಿದೆ. ಶಾಮಿಯಾನ, ವೇದಿಕೆಯ ನಿರ್ಮಾಣ, ಬ್ಯಾರಿಕೇಡ್ ಮತ್ತು ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಬೆಳಿಗ್ಗೆ 8.58ಕ್ಕೆ ಮುಖ್ಯಮಂತ್ರಿ ಅವರು ಮೈದಾನಕ್ಕೆ ಆಗಮಿಸುತ್ತಾರೆ. ಧ್ವಜಾರೋಹಣದ ಬಳಿಕ ಮುಖ್ಯಮಂತ್ರಿ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕಾರ ಮಾಡಲಿದ್ದಾರೆ. ನಂತರ, ಸ್ವಾತಂತ್ರೋತ್ಸವದ ಸಂದೇಶ ನೀಡುತ್ತಾರೆ ಎಂದು ಮಾಹಿತಿ ನೀಡಿದರು.
ಗೌರವರಕ್ಷೆ ಸ್ವೀಕರಿಸಲು ಕೆಎಸ್ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಸಿಎಆರ್, ಗೋವಾ ಪೋಲೀಸ್, ಕೆಎಸ್‌ಐಎಸ್‌ಎಫ್, ಸಂಚಾರ ಪೊಲೀಸ್, ಮಹಿಳಾ ಪೊಲೀಸ್, ಗೃಹ ರಕ್ಷಕ ದಳ, ಸಂಚಾರ ವಾರ್ಡನ್, ಅಗ್ನಿಶಾಮಕ ದಳ ಸಿಬ್ಬಂದಿ, ಶ್ವಾನ ದಳ ಮತ್ತು ಬ್ಯಾಂಡ್ ಸೇರಿದಂತೆ ಒಟ್ಟು 35 ತುಕಡಿಗಳಲ್ಲಿ ಸುಮಾರು 1,150 ಮಂದಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೈದಾನದಲ್ಲಿ ಭದ್ರತೆ ಮತ್ತು ಸುರಕ್ಷತೆಗಾಗಿ 100 ಸಿ.ಸಿ. ಕ್ಯಾಮೆರಾ, ಎರಡು ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಲಾಗಿದೆ. ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅಗತ್ಯ ಇರುವಷ್ಟು ಆಂಬುಲೆನ್ಸ್‌ಗಳು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ, ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆ ಕಾಯ್ದಿರಿಸಲಾಗಿದೆ ಎಂದು ಮಹೇಶ್ವರ ರಾವ್ ಮಾಹಿತಿ ನೀಡಿದರು.
ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು ಆನ್‌ಲೈನ್ ಮೂಲಕ ಇ–ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಸಕ್ತರು ಸೇವಾ ಸಿಂಧು ವೆಬ್‌ಸೈಟ್ (www.sevasindhu.karnataka.gov.in) ಇ–ಪಾಸ್ ಅನ್ನು ಪಡೆಯಬಹುದು. ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಕ್ರಮ ವಹಿಸಲಾಗಿದೆ. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ ಎಂದು ಮಾಹಿತಿ ನೀಡಿದರು.
ನಿಷೇಧಿತ ವಸ್ತುಗಳು:
ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು, ಬಣ್ಣದ ದ್ರಾವಣಗಳು, ವಿಡಿಯೊ ಹಾಗೂ ಸ್ಟಿಲ್ ಕ್ಯಾಮೆರಾ, ನೀರಿನ ಬಾಟಲ್ ಹಾಗೂ ಕ್ಯಾನ್, ಶಸ್ತ್ರಾಸ್ತ್ರ, ಹರಿತವಾದ ವಸ್ತುಗಳು, ಕಪ್ಪು ಕರವಸ್ತ್ರ, ತಿಂಡಿ–ತಿನಿಸುಗಳು, ಮದ್ಯದ ಬಾಟಲು ಹಾಗೂ ಮಾದಕ ವಸ್ತಗಳು, ಪಟಾಕಿ ಹಾಗೂ ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರಿಗೆ ಸೂಚನೆ:
* ಸಮಾರಂಭಕ್ಕೆ ಬರುವ ಸಾರ್ವಜನಿಕರು ಬೆಳಿಗ್ಗೆ 8.30ರ ಒಳಗಾಗಿ ನಿಗದಿತ ಆಸನಗಳಲ್ಲಿ ಆಸೀನರಾಗಬೇಕು. ಮೈದಾನದ ಒಳಗೆ ಪ್ರವೇಶಿಸುವಂತಿಲ್ಲ
* ಹಸಿರು ಬಣ್ಣದ ಪಾಸ್ (ಇ–ಪಾಸ್) ಹೊಂದಿರುವವರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್‌ರಸ್ತೆ ಮೂಲಕ ಗೇಟ್ ಸಂಖ್ಯೆ 5ರಲ್ಲಿ ಪ್ರವೇಶಿಸಬೇಕು
* ಕಾರ್ಯಕ್ರಮಕ್ಕೆ ಬರುವವರು ತಮ್ಮೊಂದಿಗೆ ಅನಗತ್ಯವಾದ ಲಗೇಜು ಹಾಗೂ ಇತರೆ ವಸ್ತುಗಳನ್ನು ತರುವಂತಿಲ್ಲ
* ಅನುಮಾನಾಸ್ಪದ ವಸ್ತುಗಳು, ವ್ಯಕ್ತಿಗಳು ಕಂಡುಬಂದರೆ ಕೂಡಲೇ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು
ಏನೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು...
* ನಾಡಗೀತೆ ಹಾಗೂ ರೈತ ಗೀತೆ: ರಾಜೇಶ್, ಡಿ.ಆರ್.ನಿರ್ಮಲಾ ಮತ್ತು ತಂಡ
* ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತೀಯರು: ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಹೇರೋಹಳ್ಳಿ, ಬೆಂಗಳೂರು
* ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು: ಪದವಿ ಪೂರ್ವ ಕಾಲೇಜು, ಶೇಷಾದ್ರಿಪುರ, ಬೆಂಗಳೂರು (ಒಟ್ಟು 500 ಮಕ್ಕಳು)
* ವಾದ್ಯಮೇಳ: ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು (ಒಟ್ಟು 253 ಮಂದಿ)
ವಾಹನ ನಿಲುಗಡೆ ನಿಷೇಧಿತ ರಸ್ತೆಗಳು
* ಸೆಂಟ್ರಲ್ ಸ್ಟ್ರೀಟ್: ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ವರೆಗೆ
* ಕಬ್ಬನ್ ರಸ್ತೆ: ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ ಹಾಗೂ ಕಬ್ಬನ್ ರಸ್ತೆ ಜಂಕ್ಷನ್ ವರೆಗೆ
* ಎಂ.ಜಿ. ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ
ಮಾಣೆಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇದೆ. ಕಾರ್ಯಕ್ರಮಕ್ಕೆ ಬರುವವರು ನಮ್ಮ ಮೆಟ್ರೊ ಬಳಸಬೇಕುಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಕಮಿಷನರ್
ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಭಾಯಿಸಲು ಅಗ್ನಿಶಾಮಕ ವಾಹನಗಳೊಂದಿಗೆ ಸಾಕಷ್ಟು ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆಮಹೇಶ್ವರರಾವ್, ಮುಖ್ಯ ಆಯುಕ್ತ, ಬಿಬಿಎಂಪಿ
ಕಾರ್ಯಕ್ರಮಕ್ಕೆ ಬರುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯ ಜತೆಗೆ ಗುರುತಿನ ಚೀಟಿಯನ್ನು ಹಾಜರು ಪಡಿಸಬೇಕು. ವೀಕ್ಷಣಾ ಗ್ಯಾಲರಿಯನ್ನು ವಿಸ್ತರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆಜಿ.ಜಗದೀಶ್, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.