ಬೆಂಗಳೂರು: ಬೆಳಗಾವಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯನ್ನು ಕಾಂಗ್ರೆಸ್ ಆಯೋಜಿಸಿದೆ.
ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದಿದ್ದ ಅಧಿವೇಶನದ ಶತಮಾನೋತ್ಸವ ನೆನಪಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಈ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದಾರೆ. ಹೀಗಾಗಿ, ಸಭೆ ಮಹತ್ವ ಪಡೆದುಕೊಂಡಿದೆ.
ಏತನ್ಮಧ್ಯೆ, 'ಕಾಂಗ್ರೆಸ್ ಪಕ್ಷವು ಭಾರತದ ನಕ್ಷೆಯನ್ನು ತಿರುಚಿದೆ. ದೇಶದ ಸಾರ್ವಭೌಮತೆಗೆ ಧಕ್ಕೆ ತಂದಿದೆ' ಎಂದು ಬಿಜೆಪಿ ಕಿಡಿಕಾರಿದೆ.
ತಿರುಚಿದ ನಕ್ಷೆ ಇರುವ ಬ್ಯಾನರ್‌ಗಳ ಚಿತ್ರಗಳನ್ನು ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ, 'ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ಬಿಂಬಿಸುವ ತಿರುಚಿದ ನಕ್ಷೆಯನ್ನು ಬೆಳಗಾವಿ ಕಾರ್ಯಕ್ರಮದ ವೇಳೆ ಪ್ರದರ್ಶಿಸುವ ಮೂಲಕ ಕಾಂಗ್ರೆಸ್ ಪಕ್ಷವು ಭಾರತದ ಸಾರ್ವಭೌಮತೆಗೆ ಅಗೌರವ ತೋರಿದೆ. ಮತಬ್ಯಾಂಕ್ ಓಲೈಕೆಗಾಗಿ ಇದನ್ನೆಲ್ಲ ಮಾಡುತ್ತಿದೆ. ಇದು ನಾಚಿಕೆಗೇಡು' ಎಂದು ಟೀಕಿಸಿದೆ.
ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭೆ ಸದಸ್ಯ ಸುಧಾಂಶು ತ್ರಿವೇದಿ ಅವರು, 'ಭಾರತವನ್ನು ವಿಭಜಿಸುತ್ತಿರುವ ಶಕ್ತಿಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದನ್ನು ಇದು ಸ್ಪಷ್ಟವಾಗಿ ತೋರುತ್ತದೆ. ಈ ನಕ್ಷೆಯು ಅದನ್ನೆಲ್ಲ ವಿವರಿಸುತ್ತದೆ. ಕಾಂಗ್ರೆಸ್ ಪಕ್ಷ ಈ ಹಿಂದೆಯೂ ಹಲವು ಬಾರಿ ಭಾರತದ ನಕ್ಷೆಯನ್ನು ತಿರುಚಿದೆ' ಎಂದು ಆರೋಪಿಸಿದ್ದಾರೆ.
‘ಕಾಂಗ್ರೆಸ್ ಬಳಸಿದ ಭೂಪಟದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಅಕ್ಸಾಯ್ ಚಿನ್ ಕಾಣೆಯಾಗಿವೆ. ಪ್ರಮುಖ ವಿಷಯವೆಂದರೆ, ಈ ಭೂಪಟವನ್ನು ಮಹಾತ್ಮ ಗಾಂಧಿಯವರ ಚಿತ್ರದೊಂದಿಗೆ ಬಳಸಲಾಗಿದೆ’ ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, 'ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಪಾಕಿಸ್ತಾನದ ರಾಗದಲ್ಲಿ ಹಾಡಿದೆ' ಎಂದು ತಿವಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.