ADVERTISEMENT

2026ಕ್ಕೆ ಭಾರತ ನಕ್ಸಲ್‌ ಮುಕ್ತ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:41 IST
Last Updated 10 ಜೂನ್ 2025, 15:41 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಬೆಂಗಳೂರು: ದೇಶದಲ್ಲಿ ಶೇ 70ರಷ್ಟು ನಕ್ಸಲಿಸಂ ಕಡಿಮೆಯಾಗಿದೆ. 2026ರ ಮಾರ್ಚ್ ವೇಳೆಗೆ ಸಂಪೂರ್ಣವಾಗಿ ನಕ್ಸಲ್‌ ಮುಕ್ತ ದೇಶವಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ನಕ್ಸಲ್‌ ಮುಕ್ತ ದೇಶದ ಜತೆಗೆ ಭಯೋತ್ಪಾದನಾ ಕೃತ್ಯಗಳ ವಿರುದ್ಧವೂ ಕಠಿಣ ಸಮರ ಸಾರಲಾಗಿದೆ. ಕಾಶ್ಮೀರ ಹೊರತುಪಡಿಸಿದರೆ ದೇಶದ ಉಳಿದೆಡೆ ಭಯೋತ್ಪಾದನೆ ನಿಯಂತ್ರಿಸಲಾಗಿದೆ. ನೇಪಾಳದ ಪಶುಪತಿಯಿಂದ ಭಾರತದ ತಿರುಪತಿವರೆಗೆ ಉಗ್ರ ಚಟುವಟಿಕೆ ನಡೆಸುವ ಹುನ್ನಾರವನ್ನು ಹತ್ತಿಕ್ಕಲಾಗಿದೆ’ ಎಂದರು.

ಭಾರತವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಸ್ಥಿರತೆಯ ಪರಿಣಾಮವಾಗಿ 2 ಟ್ರಿಲಿಯನ್‍ನಿಂದ 4 ಟ್ರಿಲಿಯನ್‌ಗೂ ಹೆಚ್ಚು ಸಾಧನೆ ಮಾಡಿದ್ದೇವೆ. ಸ್ಥಿರ ಸರ್ಕಾರದ ಪರಿಣಾಮ ಸಮರ್ಥ ಆಡಳಿತ ನೀಡಲು ಸಾಧ್ಯವಾಗಿದೆ. ರಕ್ಷಣಾ ವ್ಯವಸ್ಥೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿಯಾಗಿದೆ. ಐದು ಸಾವಿರ ಉತ್ಪನ್ನಗಳನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದ್ದು, ₹25 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಇತರೆ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ’ ಎಂದು ವಿವರ ನೀಡಿದರು.

ADVERTISEMENT

2024ರಲ್ಲಿ ಡಿಜಿಟಲ್ ವ್ಯವಹಾರವು ₹24 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಯುಪಿಐ ಖಾತೆಗಳ ಪಾಲು ಶೇ 83 ಇದೆ ಎಂದರು.

ಜನ್‌ಧನ್, ಆಧಾರ್‌ ಮತ್ತು ಮೊಬೈಲ್‌ ಲಿಂಕ್‌ ಮೂಲಕ ಇದು ಸಾಧ್ಯವಾಗಿದೆ. ₹44 ಲಕ್ಷ ಕೋಟಿ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.