ADVERTISEMENT

ಚೀನಾಗೆ ಬುದ್ಧಿ ಕಲಿಸಲು ಸೈನಿಕರು ಸಜ್ಜು: ಕೇಂದ್ರ ಸಚಿವ ಸುರೇಶ್ ಅಂಗಡಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 8:25 IST
Last Updated 17 ಜೂನ್ 2020, 8:25 IST
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ   

ಬೆಳಗಾವಿ: 'ಚೀನಾಕ್ಕೆ ಬುದ್ಧಿ ಕಲಿಸಲು ನಮ್ಮ‌ ಸೈನಿಕರು ಸಮರ್ಥರಿದ್ದು, ಸಜ್ಜಾಗಿದ್ದಾರೆ' ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, 'ಚೀನಾದ ಕುತಂತ್ರ ಬುದ್ಧಿ ಇದೇ ಮೊದಲೇನಲ್ಲ. ಜವಾಹರಲಾಲ್ ನೆಹರು ಅವರು ಪ್ರಧಾನಿ ಆಗಿದ್ದ ಕಾಲದಿಂದಲೂ ಇದೆ. ಆಗಿನ ಪರಿಸ್ಥಿತಿ ಬೇರೆ. ಈಗಿನದ್ದೇ ಬೇರೆ. ಇಡೀ ಜಗತ್ತು ಕೊರೊನಾ ಸೋಂಕಿನ ಬಿಕ್ಕಟ್ಟು ಎದುರಿಸುತ್ತಾ ಇರುವಾಗ ಚೀನಾ ಕಾಲು ಕೆರೆದು ಜಗಳಕ್ಕೆ ನಿಂತಿದೆ' ಎಂದು ಕಿಡಿಕಾರಿದರು.

'ಭಾರತ- ಚೀನಾ ವಾಸ್ತವ ಗಡಿ ರೇಖೆಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ನಮ್ಮ ಸೈನಿಕರ ಜೊತೆ ದೇಶದ ನಾಗರಿಕರೆಲ್ಲರೂ‌ ಇದ್ದೇವೆ. ಅವರ ದುಃಖದಲ್ಲಿ ಭಾಗಿಯಾಗಿದ್ದೇವೆ. ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ' ಎಂದರು.

ADVERTISEMENT

'ಭಾರತಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಚೀರಶಾಂತಿ ಸಿಗಲಿ. ಸೈನಿಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ' ಎಂದು ಪ್ರಾರ್ಥಿಸಿದರು.

'ಚೀನಾ ನರಿ ಬುದ್ಧಿ ತೋರಿಸಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೈನ್ಯ ಸನ್ನದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ‌ ರಾಜನಾಥ್ ಸಿಂಗ್ ಸಭೆ ಮಾಡಿದ್ದಾರೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ಎದುರಿಸುತ್ತೇವೆ' ಎಂದರು.

'ಭಾರತವೂ ಚೀನಾಕ್ಕೆ ತಿರುಗೇಟು ನೀಡಿದೆ. ಇನ್ನಾದರೂ ಚೀನಾ ತನ್ನ ನರಿ ಬುದ್ಧಿ ಬಿಡಬೇಕು'. 'ಯುದ್ಧದ ಪರಿಸ್ಥಿತಿ ಬಂದರೆ ಭಾರತ ಅದಕ್ಕೆ ಸನ್ನದ್ಧವಾಗಿದೆ. 130 ಕೋಟಿ ಜನರು ನಮ್ಮ ಸೈನಿಕರ ಹಿಂದೆ ಇದ್ದಾರೆ'. 'ಲಡಾಕ್‌ಗೆ ರೈಲು ಸಂಚಾರ ಸ್ಥಗಿತ ವಿಚಾರ ಕುರಿತು ವಿಡಿಯೊ ಕಾನ್ಫರೆನ್ಸ್‌ನಲ್ಲಿ ತೀರ್ಮಾನ ಮಾಡಲಾಗುತ್ತದೆ' ಎಂದು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.