ADVERTISEMENT

ನಮ್ಮನ್ನು ಬ್ರಿಟಿಷರೇ ಬೆದರಿಸಲಾಗಿಲ್ಲ, ಬಿಜೆಪಿಯಿಂದ ಸಾಧ್ಯವೇ?: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2023, 13:08 IST
Last Updated 24 ಮಾರ್ಚ್ 2023, 13:08 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಬೆಂಗಳೂರು: ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ‘ನಮ್ಮನ್ನು ಬ್ರಿಟಿಷರೇ ಬೆದರಿಸಲಾಗಿಲ್ಲ, ಬಿಜೆಪಿಯಿಂದ ಸಾಧ್ಯವೇ?’ ಎಂದು ಕೇಳಿದೆ.

2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಮಾಡಿದ ಭಾಷಣ ಸಂಬಂಧ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ವಯನಾಡು ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಮೋದಿ ಸರ್ಕಾರವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಹೆದರುತ್ತಿದೆ. ಪ್ರಜಾಪ್ರಭುತ್ವವನ್ನು ವಿನಾಶಗೊಳಿಸುವುದಕ್ಕಾಗಿ ರಾಹುಲ್‌ ಗಾಂಧಿಯವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಿದೆ. ಅವರು ಸತ್ಯವನ್ನು ಮಾತನಾಡುವವರ ಬಾಯಿ ಮುಚ್ಚಿಸಲು ಬಯಸುತ್ತಾರೆ. ಈ ಸರ್ವಾಧಿಕಾರವನ್ನು ದೇಶವಾಸಿಗಳು ಸಹಿಸುವುದಿಲ್ಲ. ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಜೈಲಿಗೂ ಹೋಗುತ್ತೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಹೆದರಿರುವ ಅಧಿಕಾರ ವ್ಯವಸ್ಥೆಯೂ ದಂಡ, ಶಿಕ್ಷೆ ಮತ್ತು ತಾರತಮ್ಯದ ಮೂಲಕ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ನನ್ನ ಸಹೋದರರ ಎಂದಿಗೂ ಭಯಪಡುವುದಿಲ್ಲ. ಸತ್ಯವನ್ನೇ ಹೇಳುತ್ತಾ ಬದುಕಿದ್ದೀವಿ, ಸತ್ಯವನ್ನು ಹೇಳುತ್ತಲೇ ಇರುತ್ತೇವೆ. ದೇಶದ ಜನರ ಪರವಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ. ಕೋಟ್ಯಂತರ ದೇಶವಾಸಿಗಳ ಪ್ರೀತಿ ಮತ್ತು ಸತ್ಯದ ಶಕ್ತಿ ಅವರ ಬಳಿ ಇದೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ‘ನೀವು ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ತೆಗೆದುಹಾಕಬಹುದು ಆದರೆ ಕೋಟ್ಯಂತರ ಭಾರತೀಯರು ಹೃದಯದಲ್ಲಿ ನೀಡಿರುವ ಸ್ಥಾನದಿಂದ ತೆಗೆದುಹಾಕುವುದು ಅಸಾಧ್ಯ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ನನ್ನ ಧಿಕ್ಕಾರ’ ಎಂದು ವಾಗ್ದಾಳಿ ಮಾಡಿದ್ದಾರೆ.

’ರಾಹುಲ್ ಗಾಂಧಿ ಅವರನ್ನು ಕಂಡರೆ ಸರ್ವಾಧಿಕಾರಿ ಸೋಕಾಲ್ಡ್ ಪ್ರಧಾನ ಸೇವಕನಿಗೆ ಮೈತುಂಬಾ ಬೆವರು ಒಸರುತ್ತದೆ. ವಿರೋಧ ಪಕ್ಷದ ಜನಪರವಾದ ಧ್ವನಿಗಳನ್ನು ಹತ್ತಿಕ್ಕುವ ಎಲ್ಲಾ ದುರ್ಮಾರ್ಗಗಳನ್ನೂ ಬಳಸುವ ಬಿಜೆಪಿ ಸರ್ಕಾರದ ನೀತಿಗಳು ಹಿಟ್ಲರ್‌ನನ್ನೂ ನಾಚಿಸುವಂತಿವೆ. ಕಾಂಗ್ರೆಸ್‌ ಅನ್ನು ಬ್ರಿಟಿಷರೇ ಬೆದರಿಸಲಾಗಿಲ್ಲ, ಬಿಜೆಪಿಯಿಂದ ಸಾಧ್ಯವೇ?’ ಎಂದು ರಾಜ್ಯ ಕಾಂಗ್ರೆಸ್‌ ತಿರುಗೇಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.