
ಬೆಂಗಳೂರು: ದೇಶದಾದ್ಯಂತ ಇಂಡಿಗೊ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ಅಡಚಣೆ ಉಂಟಾಗಿರುವ ಬೆನ್ನಲ್ಲೇ ಬೆಂಗಳೂರಿನಿಂದ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ಸೂಚನೆಯೊಂದನ್ನು ನೀಡಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನಿಂದ ಮುಂಬೈ ಮತ್ತು ದೆಹಲಿಗೆ ತೆರಳುವ ಇಂಡಿಗೊ ವಿಮಾನಗಳು ಡಿ.5ರ ಮಧ್ಯರಾತ್ರಿ 11.59ರ ತನಕ ರದ್ದುಗೊಂಡಿವೆ ಎಂದು ಬಿಎಲ್‌ಆರ್ ತನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಇಂಡಿಗೊ ವಿಮಾನಗಳ ಮೂಲಕ ಇತರ ಸ್ಥಳಗಳಿಗೆ ಪ್ರಯಾಣಿಸಲಿರುವ ಪ್ರಯಾಣಿಕರು, ದಯವಿಟ್ಟು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ನೇರವಾಗಿ ವಿಮಾನಯಾನ ಸಂಸ್ಥೆಯೊಂದಿಗೆ ತಮ್ಮ ವಿಮಾನದ ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸುವಂತೆ ವಿನಂತಿ ಮಾಡುತ್ತೇವೆ ಎಂದು ಹೇಳಿದೆ.
ಈ ಅಡಚಣೆಯಿಂದಾಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರಿಗೆ ನೆರವಾಗಲು ಇಂಡಿಗೊ ಹಾಗೂ ಕಾರ್ಯಾಚರಣಾ ಸಹಯೋಗ ಹೊಂದಿರುವ ಇತರ ಸಂಸ್ಥೆಗಳ ಜೊತೆಗೆ ನಮ್ಮ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದೆ.
ಇಂಡಿಗೊ ಸಂಸ್ಥೆಯ ಸಿಬ್ಬಂದಿಯ ಕೆಲಸದ ಸಮಯದಲ್ಲಿ ಬದಲಾವಣೆ ಆಗಿರುವುದರಿಂದ ಆ ಸಂಸ್ಥೆಯ ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.