
ನವದೆಹಲಿ: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕಿಲೋ ಅಕ್ಕಿಯ ಬದಲು ಪ್ರತಿ ಪಡಿತರ ಚೀಟಿಗೆ ‘ಇಂದಿರಾ’ ಆಹಾರ ಕಿಟ್ ವಿತರಣೆ ಯೋಜನೆಯನ್ನು ಜನವರಿ ಅಥವಾ ಫೆಬ್ರುವರಿಯಿಂದ ಜಾರಿಗೊಳಿಸಲು ತಯಾರಿ ಮಾಡಿಕೊಂಡಿದ್ದೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಎಂಎಸ್‌ಪಿಯಲ್ಲಿ ಆರು ಲಕ್ಷ ಟನ್ ರಾಗಿ ಖರೀದಿ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ ಈ ಖರೀದಿ ಪ್ರಕ್ರಿಯೆ ನಡೆಸಲಾಗಿತ್ತು. ನಮಗೆ ನಾಲ್ಕು ಲಕ್ಷ ಟನ್ ರಾಗಿ ಸಾಕಾಗುತ್ತದೆ. ಕೇಂದ್ರ ಸರ್ಕಾರದಿಂದ ₹2 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ. ಜನವರಿಯಿಂದ ಹೊಸ ಖರೀದಿ ಆರಂಭವಾಗಲಿದೆ. ಬಾಕಿ ಹಣ ನೀಡಿದರೆ ಈ ಖರೀದಿಗೆ ಅನುಕೂಲವಾಗಲಿದೆ‘ ಎಂದರು.
ರಾಜ್ಯದಲ್ಲಿ ಜೋಳ ಉತ್ಪಾದನೆ ಕಡಿಮೆ ಇದೆ. ಮಾಲ್ಡಂಡಿ ಜೋಳಕ್ಕೆ ಬೇಡಿಕೆ ಜಾಸ್ತಿ ಇದೆ. ಆದರೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟಕ್ಕೆ ರೈತರು ಒಪ್ಪುತ್ತಿಲ್ಲ. ಈ ಜೋಳದ ಎಂಎಸ್‌ಪಿ ಹೆಚ್ಚಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.