ADVERTISEMENT

ಕೈಗಾರಿಕೆಗಳಿಗೆ‌ ನೇರ ವಿದ್ಯುತ್ ಖರೀದಿಗೆ ಅವಕಾಶ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 19:45 IST
Last Updated 26 ಮಾರ್ಚ್ 2022, 19:45 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಹುಬ್ಬಳ್ಳಿ: ‘ವಿದ್ಯುತ್ ಖರೀದಿಯಿಂದ ಕೈಗಾರಿಕೆಗಳಿಗೆ ಆಗುತ್ತಿರುವ ಹೊರೆ ತಗ್ಗಿಸಲು‌ ಖಾಸಗಿ ವಿದ್ಯುತ್‌ ಕಂಪನಿಗಳಿಂದ ಕೈಗಾರಿಕೆಗಳೇ ನೇರವಾಗಿ ವಿದ್ಯುತ್ ಖರೀದಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಶನಿವಾರ ಇಲ್ಲಿ ನಡೆದ ‘ಟೈಕಾನ್ ಹುಬ್ಬಳ್ಳಿ-22’ ಸಮಾವೇಶದಲ್ಲಿ‌ ಮಾತನಾಡಿದ‌ ಅವರು, ‘ಖಾಸಗಿ‌ ವಿದ್ಯುತ್ ಉತ್ಪಾದನಾ ಕಂಪನಿಗಳಿಂದ ಪ್ರತಿ‌ ಯೂನಿಟ್‌ಗೆ ₹2ರಿಂದ ₹3ಕ್ಕೆ ಖರೀದಿಸಿ‌ ಅದನ್ನು ಕೈಗಾರಿಕೆಗಳಿಗೆ ₹10ರಿಂದ ₹12ರವರೆಗೆ ಮಾರಾಟ ಮಾಡಲಾಗುತ್ತಿದೆ. ಸಣ್ಣ ಕೈಗಾರಿಕೆಗಳಿಗೆ ಇದು ಹೊರೆಯಾಗಿದೆ. ಇದನ್ನು ತಪ್ಪಿಸಲು ಕೆಪಿಟಿಸಿಎಲ್‌ ಬದಲು ನೇರವಾಗಿ ವಿದ್ಯುತ್ ಖರೀದಿಗೆ‌ ಕೈಗಾರಿಕೆಗಳಿಗೆ ನೆರವಾಗುತ್ತೇವೆ’ ಎಂದು ಹೇಳಿದರು.

‘ಈ ಉದ್ದೇಶಕ್ಕಾಗಿ ಕೈಗಾರಿಕಾ ಸಂಘಗಳನ್ನು ರಚಿಸಿಕೊಳ್ಳಬೇಕು. ಆ ಸಂಘದ ಮೂಲಕವೇ ವಿದ್ಯುತ್ ನೇರವಾಗಿ ಖರೀದಿಸಿದರೆ ಪ್ರತಿ ಯೂನಿಟ್‌ಗೆ ₹5ರ ವರೆಗೆ ಉಳಿತಾಯ ಆಗಲಿದೆ. ಇದಕ್ಕಾಗಿ ತಗುಲುವ ₹1 ಸೇವಾ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. ಈಗಾಗಲೇ ಹಲವಾರು ಕೈಗಾರಿಕಾ ಸಂಘಗಳು ಹಾಗೂ ವಿದ್ಯುತ್‌ ಉತ್ಪಾದಕರು ಮುಂದೆ ಬಂದಿದ್ದು, ಇಬ್ಬರ ನಡುವೆ ಒಪ್ಪಂದ ಏರ್ಪಡಲಿದೆ’ ಎಂದು‌ ಅವರು‌ ತಿಳಿಸಿದರು.

ADVERTISEMENT

‘ಪರಿಶಿಷ್ಟರಿಗೆ ಕೈಗಾರಿಕಾ ಭೂಮಿ ಖರೀದಿಗಾಗಿ ನೀಡುತ್ತಿರುವ ಶೇ75ರಷ್ಟು ರಿಯಾಯಿತಿಯನ್ನು ಇತರ ವರ್ಗದವರಿಗೂ ವಿಸ್ತರಿಸಲಾಗಿದೆ. ಉಳಿದ ಶೇ25ರಷ್ಟು ಹಣವನ್ನು ಹಲವು ಕಂತುಗಳಲ್ಲಿ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದವರು ಕೈಗಾರಿಕೆಗಳನ್ನು ಆರಂಭಿಸಬಹುದಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.