ADVERTISEMENT

ಜನವರಿ-ಮಾರ್ಚ್‌ ಅವಧಿಯಲ್ಲಿ ಶೀತಜ್ವರ: ಪೂರ್ವಸಿದ್ಧತೆಗೆ ಸೂಚನೆ;ಏನೆಲ್ಲಾ ಸಿದ್ಧತೆ?

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 19:05 IST
Last Updated 20 ಡಿಸೆಂಬರ್ 2025, 19:05 IST
   

ಬೆಂಗಳೂರು: ಜನವರಿ ಮತ್ತು ಮಾರ್ಚ್‌ ಅವಧಿಯಲ್ಲಿ ತಲೆದೋರುವ ಶೀತಜ್ವರ (ಇನ್‌ಫ್ಲುಯೆನ್ಸ್) ಪ್ರಕರಣಗಳ ನಿರ್ವಹಣೆಗೆ ಈಗಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಿ ಎಂದು ಆರೋಗ್ಯ ಸೇವೆಗಳ ಆಯುಕ್ತಾಲಯವು ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದೆ.

ಚಳಿಗಾಲದಲ್ಲಿ ಶೀತಜ್ವರದ ಪ್ರಕರಣಗಳು ಹೆಚ್ಚಾಗುತ್ತವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಇದು ಮಾರಣಾಂತಿಕ ಅಲ್ಲದಿದ್ದರೂ, ಉಸಿರಾಟ ಮತ್ತು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಣಿಯರು, ವೃದ್ಧರು ಮತ್ತು ಮಕ್ಕಳಲ್ಲಿ ಅಪಾಯಕಾರಿ ಆಗಬಲ್ಲದು. ಹೀಗಾಗಿ ಶೀತಜ್ವರ ಹರಡುವುದನ್ನು ತಡೆಗಟ್ಟಲು ಮತ್ತು ಚಿಕಿತ್ಸೆಗೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸುತ್ತೋಲೆಯಲ್ಲಿ ವಿವರಿಸಿದೆ.

ಸೋಂಕು ತಗುಲಿದವರ ಗಂಟಲು ಮತ್ತು ಮೂಗಿನ ದ್ರವಗಳಿಂದ ಶೀತಜ್ವರವು ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುತ್ತದೆ. ಸೋಂಕು ತಗುಲಿದವರು ಸೀನಿದಾಗ ಕೆಮ್ಮಿದಾಗ ಅಕ್ಕಪಕ್ಕದವರಿಗೆ ಹರಡಿಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ, ಸೋಂಕು ತಗುಲಿದವರನ್ನು ಪತ್ತೆ ಮಾಡಿ, ಅದು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ವಿವರಿಸಿದೆ.

ADVERTISEMENT

ಶೀತಜ್ವರವು ಸಾಮಾನ್ಯವಾಗಿ 5–7 ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ ಈ ಅವಧಿಯಲ್ಲಿ ಸೋಂಕಿತರ ಸಂಪರ್ಕಕ್ಕೆ ಆರೋಗ್ಯವಂತ ವ್ಯಕ್ತಿಗಳು ಬರದಂತೆ ನೋಡಿಕೊಳ್ಳಬೇಕು. ಉತ್ತಮ ಗುಣಮಟ್ಟದ ಮಾಸ್ಕ್‌ ಬಳಕೆ, ಕೈಗಳನ್ನು ಆಗಾಗ್ಗೆ ಸೋಪಿನಿಂದ ಸ್ವಚ್ಛಗೊಳಿಸಿವುದನ್ನು ರೂಢಿಸಬೇಕು. ಎಲ್ಲೆಂದರಲ್ಲಿ  ಉಗುಳುವುದನ್ನು ತಡೆಗಟ್ಟಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ನಡೆಸಬೇಕು ಎಂದು ತಿಳಿಸಿದೆ.

ಸೋಂಕು ಪತ್ತೆ ಪರೀಕ್ಷೆಗಾಗಿ ರಾಜ್ಯದಾದ್ಯಂತ ಒಂಬತ್ತು ಪ್ರಯೋಗಾಲಯಗಳನ್ನು ಗೊತ್ತು ಮಾಡಿದ್ದು, ಸಂಬಂಧಿತ ಜಿಲ್ಲೆಗಳಿಂದ ಅವೇ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಬೇಕು ಎಂದು ಸೂಚಿಸಿದೆ.

ಏನೆಲ್ಲಾ ಸಿದ್ಧತೆ...

* ಎಲ್ಲ ಆಸ್ಪತ್ರೆಗಳಲ್ಲಿ ಶೀತಜ್ವರ ಚಿಕಿತ್ಸೆಗೆ ಅಗತ್ಯವಾದ ಇನ್‌ಫ್ಲುಯೆನ್ಸ ಔಷಧಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಬೇಕು. ಎನ್‌95 ಮಾಸ್ಕ್‌ಗಳ ದಾಸ್ತಾನು ಇರಬೇಕು

* ಆರೋಗ್ಯ ಸೇವಾ ಸಿಬ್ಬಂದಿಗೆ ಅಗತ್ಯವಾದ ಪಿಪಿಇ ಕಿಟ್‌ಗಳನ್ನು ಸಂಗ್ರಹಿಸಿ ಇರಿಸಿಕೊಳ್ಳಬೇಕು. ಅಗತ್ಯ ಸಿಬ್ಬಂದಿ ದೈನಂದಿನ ಕೆಲಸದ ವೇಳೆ ಪಿಪಿಇ ಕಿಟ್‌ಗಳನ್ನು ಧರಿಸಿರಬೇಕು

* ಸಾಮಾನ್ಯ ಜ್ವರ ಪ್ರಕರಣಗಳಲ್ಲಿ ಶೇ 5ರಷ್ಟು ಮತ್ತು ತೀವ್ರ ಉಸಿರಾಟದ ತೊಂದರೆ ಪ್ರಕರಣಗಳಲ್ಲಿ ಶೇ 100ರಷ್ಟು ಮಾದರಿಗಳನ್ನು ಕಡ್ಡಾಯವಾಗಿ ಶೀತಜ್ವರ ಪತ್ತೆ ಪರೀಕ್ಷೆಗೆ ಕಳುಹಿಸಬೇಕು

* ಅಗತ್ಯ ಸಂದರ್ಭ ಎದುರಾದಲ್ಲಿ ಆರೋಗ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಶೀತಜ್ವರ ಲಸಿಕೆಯನ್ನು ಹಾಕಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.