ADVERTISEMENT

ಒಂದು ರಾಷ್ಟ್ರ–ಒಂದು ಚುನಾವಣೆ: ಸಿಎಲ್‌ಪಿ ಸಭೆ ಬಳಿಕ ಕಾಂಗ್ರೆಸ್‌ ನಿಲುವು ಬದಲು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 19:31 IST
Last Updated 4 ಮಾರ್ಚ್ 2021, 19:31 IST
   

ಬೆಂಗಳೂರು: ಒಂದು ರಾಷ್ಟ್ರ–ಒಂದು ಚುನಾವಣೆ ವಿಷಯದಲ್ಲಿ ಚರ್ಚೆ ನಡೆಸುವ ತೀರ್ಮಾನಕ್ಕೆ ಬಂದಿದ್ದ ಕಾಂಗ್ರೆಸ್‌ ನಾಯಕರು, ಶಾಸಕಾಂಗ ಪಕ್ಷದ ಸಭೆಯ ಬಳಿಕ ತಮ್ಮ ನಿಲುವು ಬದಲಾಯಿಸಿದರು.

‘ಒಂದು ರಾಷ್ಟ್ರ– ಒಂದು ಚುನಾವಣೆ’ ಯಲ್ಲಿ ತಮ್ಮ ವಾದ ಮಂಡಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನ 19 ಶಾಸಕರು ತಯಾರಿ ನಡೆಸಿಕೊಂಡು ಬಂದಿದ್ದರು. ಆದರೆ, ವಿಶೇಷ ಚರ್ಚೆಯ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ(ಸಿಎಲ್‌ಪಿ) ಸಭೆಯಲ್ಲಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಶೇಷ ಚರ್ಚೆಯಲ್ಲಿ ಭಾಗವಹಿಸುವುದರ ಸಂಬಂಧ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿಯಿಂದ ಸಭಾಧ್ಯಕ್ಷರ ಕಚೇರಿಗೆ ಪತ್ರವನ್ನೂ ಬರೆಯಲಾಗಿತ್ತು. ಆದರೆ, ಗುರುವಾರ ಬೆಳಿಗ್ಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆ.ಆರ್‌.ರಮೇಶ್‌ಕುಮಾರ್‌ ಅವರು ಈ ಚರ್ಚೆಯ ಬಗ್ಗೆಯೇ ತಾತ್ವಿಕ ನೆಲೆಯಲ್ಲಿ ತಮ್ಮ ತಕರಾರು ಎತ್ತಿದರು.

ADVERTISEMENT

‘ಈಗ ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆಯ ಅಗತ್ಯವಿಲ್ಲ. ಅದನ್ನು ಬೇಕಿದ್ದರೆ ಸಂಸತ್ತಿನಲ್ಲಿ ಮಾಡಿಕೊಳ್ಳಲಿ. ನಮ್ಮ ರಾಜ್ಯವೇ ಏಕೆ ಮೊದಲು ಮಾಡಿತು ಎಂಬ ಹೆಗ್ಗಳಿಕೆ ಪಡೆಯಬೇಕು. ಇದಕ್ಕೆ ನೀವೆಲ್ಲ ಒಪ್ಪಿಕೊಂಡಿದ್ದು ಯಾಕೆ?’ ಎಂದು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

‘ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಒಪ್ಪಿಕೊಂಡ ಮಾತ್ರಕ್ಕೆ ಹಾಗೆ ನಡೆದುಕೊಳ್ಳಬೇಕೆಂದೇನೂ ಇಲ್ಲ. ಹಿಂದೆ ಬಿಜೆಪಿಯವರು ಬಿಎಸಿ ಸಭೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ? ನೀವು ಏಕೆ ಸಹಕಾರ ನೀಡುತ್ತೀರಿ’ ಎಂದು ರಮೇಶ್‌ ಕುಮಾರ್‌ ಪ್ರಶ್ನಿಸಿದರು ಎಂದು ಹೇಳಲಾಗಿದೆ.

ಅಂತಿಮವಾಗಿ ರಮೇಶ್‌ ಕುಮಾರ್ ಅವರ ಮಾತನ್ನು ಒಪ್ಪಿದ ಸಿದ್ದರಾಮಯ್ಯ ‘ಈ ವಿಶೇಷ ಚರ್ಚೆಯಲ್ಲಿ ಭಾಗವಹಿಸುವುದು ಬೇಡ. ಚರ್ಚೆ ನಡೆಯಲು ಬಿಡುವುದು ಬೇಡ’ ಎಂದೂ ಸಭೆಯಲ್ಲಿ ಹೇಳಿದರು.

ಕ್ರಿಯಾಲೋಪ ಎತ್ತಿದ ಎಚ್‌.ಕೆ.ಪಾಟೀಲ

‘ಒಂದು ರಾಷ್ಟ್ರ– ಒಂದು ಚುನಾವಣೆ’ ಕುರಿತು ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ಯಾವ ನಿಯಮದಡಿ ಅವಕಾಶ ಪಡೆದು ಮಂಡಿಸಲಾಗಿದೆ ಎಂದು ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಕ್ರಿಯಾಲೋಪ ಎತ್ತಿದರು.

ವಿಧಾನಸಭೆಯಲ್ಲಿ ಸರ್ಕಾರಿ ಕಲಾಪ ಅಥವಾ ಗೊತ್ತುವಳಿ ನಿರ್ಣಯದ ಮತ್ತು ಖಾಸಗಿ ಸದಸ್ಯರ ನಿರ್ಣಯ ಮಂಡಿಸಲು ಅವಕಾಶವಿದೆ. ಕೇಂದ್ರ ಸರ್ಕಾರದ ಯಾವುದೇ ಶ್ವೇತ ಪತ್ರ,ಕರಡು ಮಸೂದೆ, ಇನ್ನಾವುದೇ ಪ್ರಸ್ತಾವನೆ ಇಲ್ಲದೇ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂದು ಪಾಟೀಲ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.