ಅಪಘಾತ
ಸಾಂದರ್ಭಿಕ ಚಿತ್ರ
ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಸವಳಂಗ–ಶಿಕಾರಿಪುರದ ಮಧ್ಯೆ ನಡೆದ ಅಪಘಾತ ಪ್ರಕರಣದ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿಗೆ ಕೋಟ್ಯಂತರ ರೂಪಾಯಿ ವಂಚಿಸಲು ಪ್ರಯತ್ನಿಸಿದ ಜಾಲವೊಂದು ಬೆಳಕಿಗೆ ಬಂದಿದೆ.
ಅಪಘಾತ ಪ್ರಕರಣದ ಕುರಿತು ಮರು ತನಿಖೆ ನಡೆಸುವಂತೆ ವಿಮಾ ಕಂಪನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಿದೆ. ಇದು ಗೊತ್ತಾಗುತ್ತಿದ್ದಂತೆ ವಿಮೆ ಕೋರಿ ರಾಣೆಬೆನ್ನೂರಿನ ಅಪಘಾತ ಪ್ರಕರಣಗಳ ವಿಮೆ ನ್ಯಾಯಮಂಡಳಿಗೆ ಸಲ್ಲಿಸಿದ್ದ 10 ಅರ್ಜಿಗಳನ್ನು ಹಿಂಪಡೆಯಲಾಗಿದೆ.
ಸವಳಂಗ–ಶಿಕಾರಿಪುರ ರಸ್ತೆಯಲ್ಲಿ 2025ರ ಮೇ 10ರಂದು ಪ್ರವಾಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಪ್ರಕರಣ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಈ ನಡುವೆ ಅಪಘಾತದಲ್ಲಿ 10 ಜನ ಗಾಯಗೊಂಡಿದ್ದು, ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೀಗೆ ಅರ್ಜಿ ಸಲ್ಲಿಸಿದ ಬಹುತೇಕರು ಮಂಡ್ಯ ಮತ್ತು ಮೈಸೂರು ಜಿಲ್ಲೆಯವರಾಗಿದ್ದರು. ಅರ್ಜಿಯ ಜೊತೆಗೆ ಶಿಮೊಗ್ಗದ ಮೆಗ್ಗಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ದಾಖಲೆಗಳನ್ನು ಸಲ್ಲಿಸಿದ್ದರು.
ಎಲ್ಲ ಅರ್ಜಿಗಳ ಪರಿಹಾರ ಮೌಲ್ಯ ₹ 1 ಕೋಟಿಗೂ ಹೆಚ್ಚು ಇದ್ದರಿಂದ ವಿಮಾ ಕಂಪನಿ ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ಕಂಪನಿಯ ಅಧಿಕಾರಿಗಳು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು.
ಪರಿಹಾರಕ್ಕೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಗಳೊಂದಿಗೆ ಇದ್ದ ದಾಖಲೆಗಳು ಸುಳ್ಳು ಎಂಬುದು ಖಚಿತವಾಗಿತ್ತು. ಅಲ್ಲದೇ ವಿಮೆ ಕೋರಿ ಸಲ್ಲಿಸಿದ ಅರ್ಜಿದಾರರು ಈ ಬಸ್‌ನಲ್ಲಿ ಪ್ರಯಾಣಿಸಿರಲಿಲ್ಲ. ಸುಳ್ಳು ದಾಖಲೆ ನೀಡಿ ವಿಮೆ ಸೌಲಭ್ಯ ಪಡೆಯುವ ಜಾಲದ ಬಗ್ಗೆ ಅನುಮಾನಗೊಂಡ ಕಂಪನಿ ಪ್ರಕರಣದ ಕುರಿತು ಮರುತನಿಖೆಗೆ ಪೊಲೀಸರಿಗೆ ದೂರು ನೀಡಿದೆ.
‘ಅಪಘಾತ ಪ್ರಕರಣಗಳ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ನೀಡಲು ಕಂಪನಿ ಬದ್ಧವಾಗಿದೆ. ವಂಚಕರು ವಿಮಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಅಷ್ಟೇ ಜಾಗರೂಕವಾಗಿದೆ. ವಂಚನೆ ಗಮನಕ್ಕೆ ಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿಯ ಪ್ರಕಟಣೆ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.