ADVERTISEMENT

ಉಪ ಚುನಾವಣಾ ಸ್ವಾರಸ್ಯಗಳು| ‘ದುಡ್ಡು ಕೊಟ್ಟಿಲ್ಲ... ಅದ್ಕೆ ವೋಟ್‌ ಹಾಕಲ್ಲ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 20:11 IST
Last Updated 5 ಡಿಸೆಂಬರ್ 2019, 20:11 IST
ಹೊಸಪೇಟೆ ತಾಲ್ಲೂಕಿನ ‘88 ಮುದ್ಲಾಪುರ’ ಗ್ರಾಮಸ್ಥರು ಗುರುವಾರ ಮತದಾನ ಬಹಿಷ್ಕರಿಸಿ, ಗ್ರಾಮದ ಮುಖ್ಯರಸ್ತೆಯಲ್ಲಿ ಧರಣಿ ನಡೆಸಿದರು
ಹೊಸಪೇಟೆ ತಾಲ್ಲೂಕಿನ ‘88 ಮುದ್ಲಾಪುರ’ ಗ್ರಾಮಸ್ಥರು ಗುರುವಾರ ಮತದಾನ ಬಹಿಷ್ಕರಿಸಿ, ಗ್ರಾಮದ ಮುಖ್ಯರಸ್ತೆಯಲ್ಲಿ ಧರಣಿ ನಡೆಸಿದರು   

ರಾಣೆಬೆನ್ನೂರು: ‘ಚುನಾವಣೆಗೆ ಮತ ಹಾಕಲು ನಮಗೆ ದುಡ್ಡು ಕೊಟ್ಟಿಲ್ಲ. ಅದಕ್ಕ ನಾವು ವೋಟ್‌ ಹಾಕಲ್ಲ’ ಎಂದು ಇಲ್ಲಿನ ವಾಗೀಶನಗರದ 7 ಮತ್ತು 9ನೇ ವಾರ್ಡ್‌ನ ಮತದಾರರರು ಬೆಳಿಗ್ಗೆಯಿಂದಲೇ ಮತದಾನ ಕೇಂದ್ರಕ್ಕೆ ತೆರಳದೇ ಮತದಾನ ಬಹಿಷ್ಕರಿಸಿದರು.

ಚುನಾವಣೆ ಹಿಂದಿನ ದಿನ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಣ ಹಂಚಿಕೆ ಮಾಡಿದ್ದರು. ಆದರೆ ಎಲ್ಲರಿಗೂ ದುಡ್ಡು ಸಿಕ್ಕಿರಲಿಲ್ಲ. ‘ನಮ್ಮ ವಾರ್ಡ್‌ನಲ್ಲಿ ಹಣ ಹಂಚಿಕೆ ಮಾಡಿದ ನಾಯಕರು ಇಲ್ಲಿಗೆ ಬರಬೇಕು. ಅಲ್ಲಿ ತನಕ ನಾವು ಮತ ಹಾಕಲು ಹೋಗಲ್ಲ ಎಂದು ಸಂಜೆ 4 ಗಂಟೆವರೆಗೂ ಬಿಗಿ ಪಟ್ಟು ಹಿಡಿದಿದ್ದರು. ಕೊನೆಗೂ ಎರಡೂ ಪಕ್ಷದ ಮುಖಂಡರು ಬಂದು ಸಮಾಧಾನ ಮಾಡಿದ ಮೇಲೆ ಪ್ರತಿಭಟನೆ ಕೈಬಿಟ್ಟರು.

ಸಿಹಿ ಹಂಚಿದ ಬಂಡಾಯ ಅಭ್ಯರ್ಥಿ: (ಹೊಸಪೇಟೆ ವರದಿ): ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 198ರಲ್ಲಿ ಹಕ್ಕು ಚಲಾಯಿಸಲು ಸಾಲಾಗಿ ನಿಂತಿದ್ದ ಮತದಾರರಿಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಸಿಹಿ ಹಂಚಿ ಮತದಾರರನ್ನು ಸೆಳೆದರು.

ADVERTISEMENT

ಮದ್ಯ ಸೇವಿಸಿದ ಚುನಾವಣಾಧಿಕಾರಿ

(ಬೆಳಗಾವಿ ವರದಿ): ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗಿದ್ದ ಗೋಕಾಕ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ರ ಮತಗಟ್ಟೆ ಅಧಿಕಾರಿ ಪ್ರಕಾಶ ವೀರಭದ್ರಪ್ಪ ನಾಶಿಪುಡಿ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಮಾನತು ಮಾಡಿದರು. ಮದ್ಯ ಸೇವಿಸಿ ಬಂದಿದ್ದಲ್ಲೇ ವೈದ್ಯಕೀಯ ತಪಾಸಣೆ ವೇಳೆ ಅವರು ಆಸ್ಪತ್ರೆಯಿಂದ ಓಡಿ ಹೋಗಿದ್ದರು.

ಆರು ವಿ.ವಿ ಪ್ಯಾಟ್ ದೋಷ: (ಶಿರಸಿ ವರದಿ): ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗುರುವಾರ ಬೆಳಿಗ್ಗೆ ಆರು ಮತಗಟ್ಟೆಗಳಲ್ಲಿ ವಿ.ವಿ ಪ್ಯಾಟ್‌ ಗಳಲ್ಲಿ ದೋಷವುಂಟಾಗಿ, ತಕ್ಷಣ ಅವುಗಳನ್ನು ಬದಲಾಯಿಸಲಾಯಿತು. ವ್ಯಕ್ತಿಯೊಬ್ಬರು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಮಗನ ಸಾವಿನಲ್ಲೂ ಮತ ಚಲಾಯಿಸಿದ
ತಾಯಿ: (ಹಿರೇಕೆರೂರ ವರದಿ):ರಟ್ಟೀಹಳ್ಳಿ ತಾಲ್ಲೂಕಿನ ತೋಟಗಂಟಿ ಗ್ರಾಮದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ಯುವಕನ ತಾಯಿ ಹಾಗೂ ಸಹೋದರಿ ದುಃಖದ ನಡುವೆಯೂ ಉಪ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದರು.

ಮತದಾನಕ್ಕೆ ಹೊರಟಿದ್ದ ಮಹಿಳೆ ಸಾವು: ಉಪ ಚುನಾವಣೆಯ ಮತದಾನಕ್ಕೆ ಹೊರಟಿದ್ದ ತಾಲ್ಲೂಕಿನ ಆರೀಕಟ್ಟಿ ಗ್ರಾಮದ ಕಮಲವ್ವ ದೊಡ್ಡಗೌಡಪ್ಪ ಹೊಟ್ಟೇರ (65) ಗುರುವಾರ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.