ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮಿತಿ ಮೀರಿದ್ದು, ಜನಸಾಮಾನ್ಯರು, ರೈತರು, ಮಹಿಳೆಯರು ಸಂಕಷ್ಟದಲ್ಲಿದ್ದಾರೆ. ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿವೆ. ಇದರ ವಿರುದ್ಧ ಸಮರ ಸಾರಬೇಕಾಗಿರುವ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯದ ಮಾತಿನ ಸಮರ ದುರದೃಷ್ಟಕರ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
‘ಪಕ್ಷದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ. ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ಆದ್ದರಿಂದ ನಾನು ಯಾವುದೇ ಗುಂಪಿನ ಸಭೆ ಕರೆಯುವ ಪ್ರಶ್ನೆಯೂ ಉದ್ಭವಿಸುವುದಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಎಲ್ಲರನ್ನೂ ಒಂದುಗೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಹಲವಾರು ಮುಖಂಡರಲ್ಲಿ ನಾನೂ ಒಬ್ಬ. ಎರಡೂ ಕಡೆ ತಾಳ್ಮೆ ಕಳೆದುಕೊಳ್ಳದೆ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಒಟ್ಟಿಗೆ ಕುಳಿತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಬೇಕು’ ಎಂದಿದ್ದಾರೆ.
‘ವರಿಷ್ಠರು ಕೂಡಲೇ ಕರ್ನಾಟಕದಲ್ಲಿನ ಪಕ್ಷದ ಬೆಳವಣಿಗೆಯ ಬಗ್ಗೆ ಗಮನ ಹರಿಸಿ, ಎಲ್ಲ ಪ್ರಮುಖರ ಜೊತೆಗೆ ಚರ್ಚೆ ಮಾಡಿ, ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.