ಬೆಂಗಳೂರು: ‘ಒಳಮೀಸಲಾತಿ ಹಂಚಿಕೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿರುವುದು ನಿಜ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಅಲೆಮಾರಿ ಸಮುದಾಯದವರು ನಡೆಸುವ ಹೋರಾಟಕ್ಕೆ ಮಾದಿಗರು ಜತೆಯಾಗಿ ನಿಲ್ಲಲಿದ್ದಾರೆ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.
ಕರ್ನಾಟಕ ಮಾದಿಗ ಅಧಿಕಾರಿ ಮತ್ತು ನೌಕರರ ಸಮನ್ವಯ ಸಮಿತಿಯು ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ, ‘ಒಳ ಮೀಸಲಾತಿ– ಮುಂದಿನ ಹೆಜ್ಜೆಗಳು’ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಧ್ಯಕ್ಷತೆಯ ವಿಚಾರಣಾ ಆಯೋಗವು ಅತ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿತು. ಅಲೆಮಾರಿ ಸಮುದಾಯಗಳು ಅತ್ಯಂತ ಹಿಂದುಳಿದಿರುವ ಕಾರಣ, ಅವರಿಗೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಯೋಗವು ಶಿಫಾರಸು ಮಾಡಿತ್ತು. ಆದರೆ, ರಾಜ್ಯ ಸಚಿವ ಸಂಪುಟದಲ್ಲಿನ ಕೆಲ ಸಚಿವರ ಹಠದಿಂದಾಗಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ದೊರಕದೇ ಹೋಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಮಾದಿಗ ಮೀಸಲಾತಿಗಾಗಿ ನಡೆದ 35 ವರ್ಷಗಳ ಹೋರಾಟದಲ್ಲಿ ಅಲೆಮಾರಿ ಸಮುದಾಯದ ಜನರು ನಮ್ಮೊಡನೆ ನಿಂತಿದ್ದರು. ಅವರನ್ನು ಮಾದಿಗರು ಬಳಸಿಕೊಂಡು, ಈಗ ಕೈಬಿಟ್ಟಿದ್ದಾರೆ ಎಂದು ಹಲವರು ದೂರುತ್ತಿದ್ದಾರೆ. ಆದರೆ, ಅದು ನಿಜವಲ್ಲ. ಅವರಿಗಾಗಿರುವ ಅನ್ಯಾಯವನ್ನು ಸರಿಪಡಿಲಿಕ್ಕೆ ನಾನು ಹೋರಾಡುತ್ತಿದ್ದೇನೆ’ ಎಂದರು.
ಆಂಜನೇಯ ಅವರ ಮಾತಿನ ಮಧ್ಯೆ ಅವರ ಬೆಂಬಲಿಗರು, ‘ಕಾಂಗ್ರೆಸ್ ನಿಮಗೆ ವಿಧಾನ ಪರಿಷತ್ ಸದಸ್ಯತ್ವ ನೀಡಲಿ’ ಎಂದು ಘೋಷಣೆ ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ನೀವು ನನಗೆ ಮಾಡುವ ಅವಮಾನ. ಸರ್ಕಾರ ಅದನ್ನೆಲ್ಲಾ ಕೊಟ್ಟರೆ ಕೊಡಲಿ, ಇಲ್ಲದಿದ್ದರೆ ಬಿಡಲಿ. ಸಿದ್ದರಾಮಯ್ಯ ಅವರು ಒಳಮೀಸಲಾತಿ ಕೊಟ್ಟರಲ್ಲ, ಅಷ್ಟು ಸಾಕು’ ಎಂದರು.
‘ಜಾತಿ ಪ್ರಮಾಣ ಪತ್ರ ಸರಿಪಡಿಸಿಕೊಳ್ಳಿ’
‘ಒಳಮೀಸಲಾತಿ ಅಡಿಯಲ್ಲಿ ನಿಮಗೆ ಸರಿಯಾದ ಮೀಸಲಾತಿ ದೊರೆಯಬೇಕು ಎಂದರೆ ನಿಮ್ಮ ನಿಜವಾದ ಜಾತಿಯ ಹೆಸರಿನಲ್ಲೇ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿರುವವರು ಅದನ್ನು ‘ಮಾದಿಗ’ ಎಂದು ಬದಲಿಸಿಕೊಳ್ಳಬೇಕು’ ಎಂದು ಎಚ್.ಆಂಜನೇಯ ನೀಡಿದರು. ‘ಒಳಮೀಸಲಾತಿ ದೊರೆಯುತ್ತದೆ ಎಂಬ ಕಾರಣಕ್ಕೆ ಕೆಲವು ಪ್ರಬಲ ಜಾತಿಗಳ ಜನರು ಮಾದಿಗ ಎಂದು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ನಿಮ್ಮ ಹಕ್ಕನ್ನು ಕಸಿದುಕೊಳ್ಳುವ ಅಪಾಯವಿದೆ. ಹೀಗಾಗಿ ಜಾತಿ ಹೆಸರು ಬದಲಾವಣೆ ಸಂದರ್ಭದಲ್ಲಿ ಅರ್ಜಿದಾರರ ವಂಶವೃಕ್ಷ ಪಡೆದುಕೊಂಡು ಅವರ ಪೂರ್ವಿಕರ ಜಾತಿ ಪ್ರಮಾಣ ಪತ್ರಗಳನ್ನೂ ಪರಿಶೀಲಿಸಬೇಕು ಎಂದು ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ’ ಎಂದರು. ‘ನನ್ನ ಮತ್ತು ಕೆ.ಎಚ್.ಮುನಿಯಪ್ಪ ಅವರ ಜಾತಿ ಪ್ರಮಾಣಪತ್ರದಲ್ಲೂ ಆದಿ ದ್ರಾವಿಡ ಆದಿ ಕರ್ನಾಟಕ ಎಂದಿದೆ. ಒಳಮೀಸಲಾತಿ ಪಡೆಯಬೇಕು ಎಂದರೆ ನಾವಿಬ್ಬರೂ ಜಾತಿ ಪ್ರಮಾಣಪತ್ರವನ್ನು ಬದಲಿಸಿಕೊಳ್ಳಬೇಕು’ ಎಂದರು.
ಬಡ್ತಿಯಲ್ಲೂ ಒಳಮೀಸಲಾತಿ ತರಬೇಕು ಎಂದು ಬೇಡಿಕೆ ಇಟ್ಟಿದ್ದೆ. ಆ ವಿಚಾರವನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.– ಕೆ.ಎಚ್.ಮುನಿಯಪ್ಪ, ಸಚಿವ
ಆಯೋಗದ ಶಿಫಾರಸಿಗಿಂತ ಭಿನ್ನವಾಗಿ ಒಳಮೀಸಲಾತಿ ಹಂಚಿಕೆ ಮಾಡಿದ್ದಾರೆ ಎಂದು ದೂರುತ್ತಾ ಕೆಲವರು ನ್ಯಾಯಾಲಯದಿಂದ ತಡೆ ತರಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು–ಎಚ್.ಆಂಜನೇಯ, ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.